ಪುಟ:Vimoochane.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂಲಕ, ನಾನು ಎಲ್ಲ ಕಡೆಯಲ್ಲೂ ಒಂದೇ ರೀತಿಯಾಗಿ ಕಾಣಿಸಿ ಕೊಳ್ಳುತ್ತಿದ್ದ ಜೀವನದ ವಿರಾಟ್ ರೂಪವನ್ನು ಮನಸ್ಸಿನಲ್ಲೆ ಚಿತ್ರಿಸಿ

ಕೊಂಡೆ.

ಮತ್ತೆಯೊಂದು ದಿನ ಆತ ಹಸನ್ಮುಖೀಯಾಗಿ ಬಂದ.

"ಏನು ಅಮೀರ್? ಮುಖ ಚಂದ್ರನ ಹಾಗಿದೆಯೆಲ್ಲಾ. ಏನ್ಸಮಾಚಾರ ?"

ಅವನು, "ಬಾ ನಡಿ," ಎಂದ.

ಇರಾನಿಯಂಗಡಿಗೆ ಕರೆದೊಯ್ದು ಯಾರೂ ಇಲ್ಲದಿದ್ದ ಮೂಲೆಯಲ್ಲಿ ಕುಳಿತು ಕೇಕು ಬಿಸ್ಕತ್ತುಗಳ ತಟ್ಟೆಯನ್ನೇ ತರಿಸಿದ. ಆ ಮುಂಜಾವದಿಂದ ಬರಿ ಹೊಟ್ಟೆಯಲ್ಲಿದ್ದ ನಾನು ಶ್ರೀಮಂತರ ತಿಂಡಿ ಯಾದ ಕೇಕು ಬಿಸ್ಕತ್ತುಗಳನ್ನು ನಿರಾಕರಿಸಲಿಲ್ಲ. ಹಸಿದ ಹೊಟ್ಟೆಗೆ ಯಾವುದಾದರೇನಂತೆ?

"ನೋಡು ಶೇಖರ್. ಆ ದಿವಸ ನೀನು, ಚಾಲಾಕಿ ಇದ್ದರೆ ಶ್ರೀಮಂತರ ಮೇಲೆ ಪ್ರಯೋಗಿಸು ಎಂದಿದ್ದೆ. ಈ ದಿನ ಹಾಗೆಯೇ ಮಾಡ್ದೆ, ಈ ಷರಾಯಿ ಜೇಬಿನಲ್ಲಿ ಎಷ್ಟು ರೊಪಾಯಿ ಇದೆ ಹೇಳ್ತೀಯಾ?"

"ಓ ಹಾಗೋ ? ಆಮೀರ್ ಆಮೀರನೇ ಆಗಿರಬೇಕು ಹಾಗಾದರೆ."

"ಆಂಥಾದೇನೂ ಇಲ್ಲ. ಎರಡು ಹಸುರು ನೋಟು, ಐದರದು ಹತ್ತು."

ನಾನು ಯಾವ ಮುಖ ವಿಕಾರವೂ ಇಲ್ಲದೆ ಮೌನವಾಗಿ ಕುಳಿತೆ, ನಮ್ಮ ಊರಲ್ಲಿ ಪಾಕೀಟು ಕಳೆದುಕೊಂಡ ದೊಡ್ಡ ಮನುಷ್ಯರು ........ ಆ ಲಾಕಪ್ಪು.. .. ಕ್ಷಯರೋಗದಿಂದ ನರಳುತ್ತಿದ್ದರೂ ರಾತ್ರೆಯಲ್ಲಾ ಮರದ ಕೆಳಗೆ ಕಾದು ಕುಳಿತ ತಂದೆ........ ಆ ಕೊನೆಯ ಘಳಿಗೆಯ ಸಂಭಾಷಣೆ: "ಚಂದ್ರೂ, ಆ ದಿವ್ಸ ನೀನು ಪಾಕೀಟು ಕದ್ದಿರಲಿಲ್ಲ ಅಲ್ವಾ?"... ... "ಇಲ್ಲಪ್ಪಾ ನಾನು ಯಾವತ್ತಾದರೂ ಹೀಗ್ಮಾ ಡೇನಾ?"..............