ಪುಟ:Vimoochane.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಮಾನ್ಯ ಜನರ ವಿರುದ್ಧ ಕೈ ಎತ್ತಿಯೇ ಇಲ್ಲ. ಅಥವರ ಜೇಬಿಗೆ ಕೈ ಹಾಕೇ ಇಲ್ಲ. ಆದರೆ ಶ್ರೀಮಂತರ ವಿಷಯ ಬೇರೆ."

..... ಹೊರಡುತ್ತಲಿದ್ದಾಗ ಒಂದು ನೋಟನ್ನು ಅಮಾರ್ ನನ್ನ ಜೇಬಿಗೆ ತುರುಕಿದ. ನಾನು ಬೇಡನೆಂದೆ. ಅವಶ್ಯತೆ ಇದ್ದರೂ ಅವನಿಂದ ಐದು ರೂಪಾಯಿ ಪಡೆಯಲು ಮನಸ್ಸು ಇಷ್ಟಪಡಲಿಲ್ಲ.

"ಗೊತ್ತು ಶೇಖರ್. ನಿನಗೆ ಪಾಪದ ಹಣ ಬೇಕಾಗಿಲ್ಲ. ನೀನು ದುಡಿದು ಸಂಪಾದಿಸೋ ಮರ್ಯಾದಸ್ಥ, ನಾನು ಸುಲಿದು ತಿನ್ನೋ ಬೇಬು ಕಳ್ಳ ಅಲ್ವಾ ?"

"ಹಾಗೆ ಹೇಳ್ಬಾರ್ದು ಅಮೀರ್."

"ಮತ್ತೆ -?"

ನಾನು ಉತ್ತರವೀಯದೆ, ನನ್ನ ಜೇಬು ಸೇರಿದ್ದ ನೋಟಿ ನೊಡನೆ ಹೊರಟುಹೋದೆ. ಬಲು ದೂರ ಹೋದೆ. ಪಶ್ಚಿಮ ತೀರದ ಸಮುದ್ರ ಮೆರಿನ್ ಡ್ರೈವಿನ ದಡಕ್ಕೆ ಅಪ್ಪಳಿಸುತ್ತಿತ್ತು. ಸಮುದ್ರ ವನ್ನೇ ನೋಡುತ್ತ ಭವ್ಯವಾದ ಕಟ್ಟಡಗಳು ಸಾಲಾಗಿ ನಿಂತಿದ್ದುವು. ಆ ಹಾದಿಯಲ್ಲಿ ಸಾಗಿದಾಗ, ನಾನೊಬ್ಬ ಬಲು ಸಣ್ಣ ಮನುಷ್ಯ ಪ್ರಾಣಿಯಾಗಿ ಕಂಡೆ. ಅಲ್ಲಿಂದ ಚೌಪಾಟಿಯ ಮರಳು ರಾಶಿಗಿಳಿದು ಸಹಸ್ರಾರು ಜನರೊಡನೆ ಬೆರೆತಾಗ, ನನ್ನ ವ್ಯಕ್ತಿತ್ವ ಅನರೆಡೆಯಲ್ಲಿ ಅಳಿಸಿಹೋಯಿತು. ಆಗ ಮನಸ್ಸಿಗೆ ನೆಮ್ಮದಿ ಎನಿಸಿತು.

ಗತ ಕಾಲದ ಘಟನೆಗಳನ್ನು ಮನಸ್ಸಿನಲ್ಲಿ ಮೆಲುಕು ಹಾಕ ತೊಡಗಿದೆ. ಅಂತರ್ಮುಖಿಯಾಗಿ ಯೋಚಿಸುತ್ತ ಕುಳಿತ್ತಿದ್ದ ನಾನು ಜೇಬಿನೊಳಕ್ಕೆ ಕೈ ಹಾಕಿದೆ. ನೋಟು ಮುದುಡಿಕೊಂಡಿತ್ತು. ಅದನ್ನು ಹೊರ ತೆಗೆದೆ. ಆ ನೋಟು-ಐದು ರೂಪಾಯಿನದಾಗಿರಲಿಲ್ಲ. ತನ್ನ ಬೆಲೆ ನೂರು ಎಂದು ಅದರ ಬಣ್ಣ ಸಾರುತ್ತಿತ್ತು. ಎಂತಹ ವ್ಯಕ್ತಿ ಈ ಅಮೀರ್! ಇದರರ್ಥವೇನು ? ನನ್ನ ಕೈಯಲ್ಲಿ ನೂರು ರೂಪಾಯಿ! ಕ್ಷಯ ರೋಗಿಯಾದ ತಂದೆಗೋಸ್ಕರ ನೆರವು ಪಡೆಯಲು ಹೋದಾಗ ಆ ದೊಡ್ಡಮನುಷ್ಯರ ಮನೆಯಲ್ಲಿ ನನಗೆ ದೊರೆತಿದ್ದ ಎರಡು ನಾಣ್ಯ ಗಳು ಮತ್ತು ಈ ನೂರು ರೂಪಾಯಿ!