ಪುಟ:Vimoochane.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇದು ಸರಿಯಲ್ಲವೆಂದು ನನಗೆ ತೋರಿತು. ನಾಳೆಯ ದಿನ ಅಮೀರ್ ಬಂದಾಗ ಹಿಂದಿರುಗಿಸಬೇಕೆಂದುಕೊಂಡೆ.

........ಮತ್ತೆ ಎರಡು ದಿನ ಅಮೀರ್ ಕಣಿಸಲಿಲ್ಲ ನನಗೆ ಸಾಕಷ್ಟು ಕೂಲಿಯೂ ಸಿಗಲಿಲ್ಲ. ಆ ನೋಟಿಗೆ ‌ಚಿಲ್ಲರೆ ಪಡೆದು ಒಂದು ರೂಪಯಿ ಖರ್ಚುಮಾಡಿ ನಾಳೆಯ ಸಂಪಾದನೆಯಿಂದ ಸೇರಿಸಿ ಹಿಂತಿರುಗಿಸಬಹುದು ಎಂದು ಯೋಚಿಸಿದೆ. ಅದು ಸರಿಯಲ್ಲ ಎಂಬ ಭಾವನೆ ಮತ್ತೆ ಬಾಧಿಸಿತು. ಆದರೆ ಹಸಿವು, "ಅದರಲ್ಲೇನು ತಪ್ಪು?" ಎಂದು ಕೇಳುತ್ತಿತ್ತು.

ನಾನು ಒಂದು ಹೋಟೆಲಿನ ಬಳಿ ಸಾರಿ, "ನೂರು ರೂಪಾಯಿಗೆ ಚಿಲ್ಲರೆ ಇದೆಯಾ?" ಎಂದು ಕೇಳಿದೆ.

ಹೋಟೆಲಿನಲ್ಲಿ ದುಡ್ಡು ಎಣಿಸುತ್ತಲಿದ್ದವನು ನನ್ನನ್ನೇ ನೋಡಿದ. ಆ ದೃಷ್ಟಿಯ ವಿಧಾನ ನನಗೆ ಪರಿಚಿತವಾಗಿತ್ತು. ಸಂದೇಹದಿಂದ ಸಂಶಯದಿಂದ ಅಷ್ಟರವರೆಗೆ ಎಷ್ಟೊಂದು ಜನ ನನ್ನನ್ನು ನೋಡಿರಲಿಲ್ಲ! ನನ್ನಂತಹ ಭಿಕಾರಿ ನೂರು ರೂಪಾಯಿಯ ಚಿಲ್ಲರೆ ಕೇಳುವುದರಲ್ಲಿ ಅಸಾಮಾನ್ಯವಾದುದು ಇದ್ದೇ ಇರಬೇಕಲ್ಲವೆ?

ಬೊಂಬಾಯಿಯ ಪೋಲೀಸರ-ಲಾಕಪ್ಪಿನ ಪರಿಚಯ ನನಗೆ ಆಗಿರಲಿಲ್ಲ. ಮಾಡಿಸಿಕೊಳ್ಳುವ ಇಷ್ಟವೂ ನನಗಿರಲಿಲ್ಲ.

"ಚಾ ತಗೊಂಡು ಎಂಟು ಹತ್ತಾಣೆ ಬಿಲ್ ಆದರೆ ಕೊಡ್ತೀ ನಪ್ಪಾ" ಎಂದನಾತ.

ಮುಂದೆ ಏನಾಗಬಹುದಾಗಿತ್ತೋ ಹೇಳುವುದು ಸಾಧ್ಯವಿರಲಿಲ್ಲ. ನಾನು ಹೋಟಲಿನ ಒಳಹೋದಾಗ ಪೋಲೀಸರಿಗೆ ಬರಲು ಆತ ಆಮಂತ್ರಣವಿತ್ತರೂ ಇತ್ತನೆ. ನಾನು ಒಳಹೋಗಲಿಲ್ಲ.

"ಚಿಲ್ಲರೆ ನನಗಲ್ಲ. ಬೇರೆ ಯಾರಿಗೋ ಬೇಕಾಗಿತ್ತು. ನಾನು ಖರ್ಚು ಮಾಡೋಕಾಗಲ್ಲ" ಎಂದೆ.

ಹಾಗೆ ಹೇಳಿ ಮುಂದೆ ಸಾಗಿದೆ....

ಮರುದಿನ ನನ್ನನ್ನು ಹುಡುಕಿಕೊಂಡು ಬಂದ ಆಮೀರನನ್ನು ನೋಡಿ ಅವಾಕ್ಕಾಗಿ ನಿಂತೆ. ಆತ ಖಿಲಾಡಿಯ ಹಾಗೆ ನಗುತ್ತಿದ್ದ.