ಉಣ್ಣೆಯ ಸೂಟು, ಹೊಳೆಯುತ್ತಿದ್ದ ಷೂಗಳು, ತಿದ್ದಿ ಬಿಡಿಸಿದ್ದ ಕ್ರಾಪು__ಸಣ್ಣ ಮೀಸೆ, ಉರಿಯುತ್ತಿದ್ದ ಸಿಗರೇಟು........
"ಏನಣ್ಣಾ ಇದು ?"
"ಯಾಕೆ, ಚೆನ್ನಾಗಿಲ್ವೇನೊ?"
"ಇಲ್ದೇ ಏನು? ನಿಜವಾಗಿಯೂ ಅಮೀರನಾಗೇ ಕಾಣ್ತೀಯ. ಎಷ್ಟು ಬೇಗ ಹೊಸ ಬಟ್ಟೆ ಹೊಲಿಸ್ಕೊಂಡೆ!"
"ನೀನೊಬ್ಬ ಗುಗ್ಗು. ಸರಿಯಾಗಿ ನೋಡ್ಬಾರ್ದ? ಹೊಸ ಬಟ್ಟೇನ ಇದು?"
ಅದು ಹೊಸದಾಗಿರಲಿಲ್ಲ.
"ಗುಜರಿಯಿಂದ ತಗೊಂಡೆ ಕಣೋ. ಹಿಂದೆ ಯಾವ ಶ್ರೀಮಂತ ಹುಡುಗನ ಮೈ ಬೆಚ್ಚಗೆ ಮಾಡಿತ್ತೊ, ಏನೊ. ಆದರೆ ಈಗ ನನ್ನ ಕೈಗೆ ಬಂದಿದೆ. ಹೀಗಾಗ್ಬೇಕಾದರೆ ಈ ಉಣ್ಣೆ ಹೊತ್ತಿದ್ದ ಆ ಕುರಿಗಳು ಎಷ್ಟು ಪುಣ್ಯ ಮಾಡಿರ್‍ಬೇಡ ಹೇಳು?"
ನಾನು ನಕ್ಕುಬಿಟ್ಟೆ.
"ಶೇಖರ್, ಇವತ್ತು ಮಜವಾಗಿರ್ಬೇಕು ನಡಿ ಹೋಗೋಣ. ಎಲ್ಲಿಗಾದರೂ_"
ಆತನಿಗೆ ಪ್ರಾಯಶಃ ತಾನು ನನಗೆ ಕೊಟ್ಟಿದ್ದ ಹಸುರು ನೋಟಿನ ನೆನಪೇ ಇರಲಿಲ್ಲವೇನೊ.
"ಯಾಕ್ಮಗು? ಯಾಕೆ ಹಾಗಿದ್ದೀಯ? ಇನ್ಯಾವ ಗಾಡಿ ಬರೋದಿದೆ? ನಿಮ್ಮಾವ ಮತ್ತು ಮಾವನ ಮಗಳು ಬರ್‍ತಾರೇನು? ಅವರ ಜಿಡ್ಡಿಂಗ್ ಹೊರ್‍ಬೇಕೆನೊ ಪಾಪ!"
ಆಂತಹ ವ್ಯಂಗ್ಯ ಮಾತಿನಿಂದ ನನಗೆ ನೋವಾಗುತ್ತಿರಲಿಲ್ಲ_ ಅಮೀರನ ಹೃದಯ ನಿರ್ಮಲವಾಗಿತ್ತು.
"ಅಮೀರ್, ನಿಂಗೆ ನಗು ಬರುತ್ತೊ ಏನೋ. ನಿನ್ನ ನೋಟು ವಾಪಸ್ಸುಕೊಡ್ಬೇಕೂಂತ ಎರಡು ದಿವ್ಸ ನಿನ್ನ ಹಾದಿ ನೋಡ್ದೆ. ಕಡೆಗೆ ಚಿಲ್ಲರೆಮಾಡಿ ಒಂದು ರೂಪಾಯಿ ಖರ್ಚುಮಾಡೋಣಾಂತಿದ್ದೆ. ಚಿಲ್ಲರೆ ಕೇಳೊಕ್ಕೋದರೆ ಹೋಟೆಲಿನವನಿಗೆ ಸಂಶಯ ಬಂದ್ಬಿಡ್ತು