ಪುಟ:Vimoochane.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಧಕ್ಕರ್ಧ ಜನ ದೂರವೇ ನಿಂತಿದ್ದರು.ಆಗ ಪೋಲೀಸರ ಧಾಳಿ ನಡೆಯಿತು. ಗುಂಡುಗಳು ಹಾರಲಿಲ್ಲ. ಆದರೆ ಲಾಟಿಗಳು ಸಪ್ಪಳ ಮಾಡಿದುವು. ತೋಳ ನುಗ್ಗಿದಾಗ ಚೆದರಿ ಹೋಗುವ ಕುರಿಯ ಹಿಂಡಿನಹಾಗೆ ಜನ ಚೆಲ್ಲಾಪಿಲ್ಲಿಯಾಗುತ್ತಿದ್ದರು. ಧೈರ್ಯವಾಗಿ ಅಲ್ಲೇ ನಿಂತವರ ತಲೆಯೊಡೆದು ರಕ್ತ ಸೋರುತ್ತಿತ್ತು. ಬಾವುಟ ಹಿಡಿದವ ನನ್ನೂ ಅವನ ಹಿಂದಿದ್ದ ಹತ್ತಾರು ಜನರನ್ನೂ ಅವರ ಪಾಡಿಗೆ ಬಿಟ್ಟು ಎಷ್ಟೋಜನ ಸತ್ಯಾಗ್ರಾಹಿಗಳು ಚೌಪಾಟಿಗೆ ವಾಪಸ್ಸು ಧಾವಿಸಿದರು. ಸರಕಾರದ ರಕ್ಷಕರಾಗಿದ್ದ ಪೋಲೀಸರು ಅವರನ್ನು ಬೆನ್ನಟ್ಟಿದರು. ನಾನು ಮತ್ತು ಅಮೀರ್ ಹಿಂದಕ್ಕೆ ಸರಿಯಬೇಕೆಂದು ಯೋಚಿಸುತ್ತಿರು ವಷ್ಟರಲ್ಲೇ ಲಾಟಿ ಬೀಸಿತ್ತು. ನಮ್ಮ ಮೇಲಲ್ಲ-ನಮ್ಮ ಬಳಿಗೆ ಬಂದಿದ್ದ ಹದಿನೆಂಟು ಇಪ್ಪತ್ತರ ಗುಜರಾತಿ ಯುವತಿಯೊಬ್ಬಳ ಮೇಲೆ, ಅವಳ ತಮ್ಮನಂತೆ ಕಾಣುತ್ತಿದ್ದ ಹುಡುಗನೊಬ್ಬನ ಮೇಲೆ. ಅವರು ನೆಲಕ್ಕು ರುಳಿದರು.ಆಕೆ, "ಅಯ್ಯೊ" ಎಂದಳು. ಆ ಹುಡುಗ "ಮಹಾತ್ಮ ಗಾಂಧಿಕಿ ಜೈ," ಎಂದು ಕೂಗಾಡಿದ. ನೋಡಿದರೆ, ಎಂದಿಗೂ ಬೀದಿಗೆ ಇಳಿಯದೇ ಇದ್ದಂತಹ ಕೋಮಲ ಕಾಯರ ಹಾಗೆ ಅವರು ತೋರುತ್ತಿದ್ದರು. ನಾನು ಅವರಿಗೆ ಶುಶ್ರೂಷೆ ಮಾಡಲೆಂದು ಬಾಗಿದೆ. ಆ ಗೊಂದಲದಲ್ಲಿ ಸಿಲುಕಲು ಇಷ್ಟವಿಲ್ಲದೇ ಇದ್ದರೂ ಅಮೀರ್, ತಾನೂ ನನಗೆ ನೆರವಾದ. ಕ್ಷಣಾರ್ಧದಲ್ಲಿ ಆ ಇಬ್ಬರೊಡನೆ ನಮ್ಮನ್ನೂ ಬಂಧಿಸಿದ್ದರು.

ಲಾಕಪ್ಪಿನಲ್ಲಿ ಹಲವಾರು ಸತ್ಯಾಗ್ರಹಿಗಳ ಜತೆಯಲ್ಲಿ ನಾವು ಒಂದು ದಿನ ಕಳೆದವು. ಅಮೀರ್ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದ. ಪರಿಸ್ಥಿತಿ ವಿಚಿತ್ರವಾಗಿಯೇ ಇತ್ತು. ಸೂಟು ಧರಿಸಿದ್ದ ನಾವು ಖಾದಿ ಧಾರಿಗಳ ಜತೆಯಲ್ಲಿದ್ದೆವು. ಜೇಬುಗಳ್ಳರಾದ ನಾವು ಸತ್ಯಾಗ್ರಹಿಗಳ ಸಂಗಾತಿಗಳಾಗಿದ್ದೆವು. ಹಿಂದೆ ನನಗೆ ಲಾಕಪ್ಪಿನ ಅನುಭವವಾದಾಗ ನನ್ನ ಕೈಲಿದ್ದ ಹಣವನ್ನೆಲ್ಲಾ ಪೋಲೀಸ್ ಅಧಿಕಾರಿ ಪಡೆದಿದ್ದ. ಆದರೆ ಈ ಸಾರಿ ನಾವು ಸತ್ಯಾಗ್ರಹಿಗಳ ಜತೆಯಲ್ಲಿದ್ದುದರಿಂದ ಅಮೀರನ ಆ ದಿನದ ಸಂಪಾದನೆ ಅವನ ಕೈ ಬಿಡಲಿಲ್ಲ.