ವಿಳಾಸ ಅವನಿಗೆ ಸರಿಯಾಗಿ ನೆನಪಿರಲಿಲ್ಲ.ನೆನಪಿದ್ದಂತೆ ಬರೆಯುವ ಇಷ್ಟವೊ ಅವನಿಗಿರಲಿಲ್ಲ.
ಅಮೀರನ ಭಾವನೆಗಳನ್ನು ತಿಳಿದುಕೊಂಡ ಶೀಲ ಅವನ ಬಳಿಗೆ ಬಂದಳು. ಅವನ ಕೊರಳಿನ ಸುತ್ತಲೂ ಕೈ ಹಾಕಿದಳು ಆ ಕ್ರಾಪಿನ ಮೇಲೆ ಮೂಗನ್ನಿರಿಸಿದಳು. "ಅಮೀರ್ ಅಮೀರ್", ಎಂದಳು.
ಊರಿನ ನೆನಪಾಗಿ ಆತ ತನ್ನನ್ನು ಎಲ್ಲಾದರೂ ಬಿಟ್ಟುಹೋಗ ಬಹುದೆಂಬ ಭೀತಿ ಅವಳನ್ನು ಕಾಡುತಿತ್ತೇನೊ. ಅಥವಾ ತನಗಿಂತ ಬೇರೆಯಾದ ಯಾವುದನ್ನು ಯಾರನ್ನೂ ಆತ ಪ್ರೀತಿಸಬಾರದೆಂಬ ಅಸೂಯೆ ಅವಳನ್ನು ಬಾಧಿಸುತಿತ್ತೇನೊ.
ಮೂಲೆಯಲ್ಲಿ ಕುಳಿತಿದ್ದ ಆಕೆಯ ತಂದೆ, ಇದ್ದೊಂದೆ ಪುಟ್ಟ ಕಿಟಕಿಯ ಮೂಲಕ ಹೊರಕ್ಕೆ ನೋಡುತ್ತಿದ್ದ. ನಾನು ಕ್ಷಣ ಕಾಲ ಮುಕ್ತಾಯಗೊಳಿಸಿದ ಕಾಗದದ ಮೇಲೆಯೇ ದೃಷ್ಟಿ ಬೀರಿದ್ದೆ.......... ತಲೆ ಎತ್ತಿ ನೋಡಿದಾಗ, ಶೀಲಳ ಮುಖ ಲಜ್ಜೆಯಿಂದ ಕೆಂಪಾಗಿತ್ತು. ಅಮೀರ್ ನಗುತಿದ್ದ. ನನಗೆ ನಾಚಿಕೆ ಎನಿಸಿತು.
"ನಾನು ಹೊರಕ್ಕೆ ಹೋಗ್ಬಿಟ್ಟು ಬರ್ತೀನಿ ಅಮೀರ್," ಎಂದೆ.
"ತಾಳು, ಶೀಲನೂ ಬರ್ತಾಳೆ. ಮೂವರೂ ಹೋಗಿ ಯಾವು ದಾದರೂ ಸಿನಿಮಾ ನೋಡ್ಕೊಂಡು ಬರೋಣ."
ನಾನು ಲಕೋಟಿ ಮೇಲೆ ವಿವರವಾಗಿ ಅಜ್ಜಿಯ ವಿಳಾಸ ಬರೆದೆ. ಕೆಳ ಮಗ್ಗುಲಲ್ಲಿ ನನ್ನ, ಅಂದರೆ ಅಮೀರನ ಕೊಠಡಿಯ, ವಿಳಾಸ ಬರೆದೆ. ಲಕೋಟಿಯನ್ನು ಮುಚ್ಚಿ ಅದರ ಮೇಲೆ ಬೆರಳಾಡಿಸುತ್ತಾ ಕುಳಿತೆ.
ಅಷ್ಟು ಹೊತ್ತಿಗೆ ಶೀಲ ಸಿದ್ದಳಾಗಿ ಬಂದಳು. ಅವಳುಟ್ಟಿದ್ದ ಗುಲಾಬಿ ವರ್ಣದ ಪತ್ತಳ ಮೋಹಕವಾಗಿತ್ತು. ಅಮೀರ್ ಮಾತ್ರ ಪಾಯಜಾಮ ತೊಟ್ಟು ಹಳೆಯದೊಂದು ಷರಟು ಹಾಕಿ ಹೊರಟಿದ್ದ. ಶೀಲ ವಿರೋಧಿಸಿದಳು. ನನಗೆ ದೂರು ಕೊಟ್ಟಳು
"ನೋಡು ಶೇಖರ್, ಎಂಥ ಕೊಳಕು ಬಟ್ಟೆ ಹಾಕ್ಕೊಂಡಿದಾನೆ. ನೀನ್ಸೊಲ್ಪ ಹೇಳಪ್ಪಾ ಅವನಿಗೆ. ಇಲ್ದೆಹೋದ್ರೆ ನಾನು ಬರೋದೇ ಇಲ್ಲ" ನಾನು ನಗುತ್ತಾ ಅಮೀರನ ಮುಖ ನೋಡಿದೆ.