ಪುಟ:Vimoochane.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಟ್ಟರು. ಹಿಂದೊಮ್ಮೆ, ಮತ್ತೆ ಈಗ, ಎರಡು ಸಾರೆ ಅವರ ಪಕ್ಕದ ಅಂಗಳಕ್ಕೆ ಪೋಲೀಸರ ಆಗಮನವಾಗಿತ್ತು. ನಾನು ಕಂದೀಲನ್ನೆತ್ತಿ ಕೊಂಡು, ಒಳ ಮನೆಯನ್ನು, ದೇವರ ಮನೆಯನ್ನು, ಅಡುಗೆ ಮನೆ ಯನ್ನು- ಎಲ್ಲವನ್ನೂ ಶೋಧಿಸಿದೆ. ಒಡೆದು ಹೋಗಿದ್ದ ನಾಲ್ಕಾರು ಮಡಿಕೆಗಳ ಹೋಳುಗಳು ಮಾತ್ರ ನನ್ನ ಕಾಲಿಗೆ ಅಡ್ಡವಾಗಿ ಬಂದುವು. ಕಣ್ಣಿಗೆ ಬೇರೇನೂ ಕಾಣಿಸಲಿಲ್ಲ. ಎಲ್ಲವೂ ಖಾಲಿಯಾಗಿತ್ತು- ಎಲ್ಲವೂ-. ಆ ಬಡಕಲು ಗೋಡೆ ಬದಿರು ಛಾವಣಿಯ ಮನೆಯ ಹೊರತು, ನನ್ನ ಪಾಲಿಗೆ ಬೇರೇನೂ ಉಳಿದಿರಲಿಲ್ಲ. ಜೀವಮಾನ ವೆಲ್ಲಾ ಒಂದೊಂದು ತುತ್ತು ಎತ್ತಿಟ್ಟು ಕೂಡಿಸಿದ್ದ ವಿಕ್ಟೋರಿಯಾ ರಾಣಿಯ ನಾಣ್ಯಗಳು,,,, ಅವುಗಳಲ್ಲಿ ಇನ್ನೂರಕ್ಕೂ ಹೆಚ್ಚು ಅಲ್ಲಿ ಉಳಿ ದಿದ್ದವು. ಬಂದಿದ್ದವರ ಪಾಲಿಗೆ ಅದೇ ದೊಡ್ಡ ಸಂಪಾದನೆಯಾಗಿತ್ತು. ಆದರೂ ಸಣ್ಣ ಪುಟ್ಟ ವಸ್ತುಗಳನ್ನೂ ಅವರು ಬಿಟ್ಟಿರಲಿಲ್ಲ. ಹರಿದು ಹೋಗಿದ್ದ ಚಾದರವನ್ನೂ ಒಯ್ದಿದ್ದರು. ಒಳಗೆ ಗೂಟಕ್ಕೆ ತಗುಲಿ ಹಾಕಿದ್ದ ಕೈಯಿಲ್ಲದ ಬೀಗವನ್ನೂ ಅವರು ಹೊತ್ತಿದ್ದರು. ಯಾವ ಅವಸರವೂ ಇಲ್ಲದೆ ಮನೆ ಖಾಲಿಮಾಡುವ ಕೆಲಸ ಬಲು ಶಿಸ್ತಿನಿಂದ ನಡೆದಿತ್ತು. ನಗಬೇಕೋ ಮುಖ ಬಾಡಿಸಿಕೊಳ್ಳಬೇಕೋ ನನಗೆ ತಿಳಿಯಲಿಲ್ಲ. ಒಳಗೆ ಮನಸ್ಸು ಸುಣ್ಣವಾಗಿತ್ತು. ಆದರೆ ಹೊರಗೆ ಮುಖಭಾವನೆ ಹಾಗಿರಲಿಲ್ಲವೇನೋ. ನೆರೆಮನೆಯವರು ಬಲು ಆಶ್ಚರ್ಯದಿಂದ ನನ್ನನ್ನೇ ನೋಡುತ್ತಿದ್ದರು

" ಸ್ಟೇಷನ್ನಿಗೆ ತರಲೇ ಇಲ್ಲವೇನು ಹಾಗಾದರೆ ? "

ಯೋಚನೆಯ ಲೋಕದಿಂದ ಭೂಮಿಗೆ ಇಳಿದೆ ನಾನು.

" ಏನನ್ನು ?" ಎಂದೆ."

" ಅದೇ ಇವನ್ನ-ಸಾಮಾನುಗಳ್ನ."

" ಸಾಮಾನುಗಳನ್ನೆ? ತಗೊಂಡು ಹೋಗಿದ್ದಾಯ್ತು. ಇನ್ಯಾವ ಯೋಚನೆಯೂ ಇಲ್ಲವಲ್ಲ."

ಅವರು ಅವಾಕ್ಕದರು.

" ಒಂದು ಚಿಮಣಿ ದೀಪ ತಂದುಕೊಡ್ಲೇನು ?"