ಪುಟ:Vimoochane.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಗಡಿ ಬೀದಿಯ ದೀಪಗಳು ಹೆಚ್ಚು ಹತ್ತಿರವಾದುವು . ನಾನು ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ , ಆರನೆಯ ಕ್ರಾಸನ್ನು ತಲಪಿದೆ. ಶೇಷಗಿರಿ ತನ್ನ ಪುಟ್ಟ ಅಂಗಡಿಯನ್ನು ಮುಚ್ಚುವ ಸಿದ್ದತೆಯಲ್ಲಿದ್ದ. ನಾನು ಅಂಗಡೀಯ ಎದುರು ನಿಂತು, ಬಣ್ಣ ಬಣ್ಣದೊಂದು ಪತ್ರಿಕೆಗೆ ಕೈ ಹಾಕಿದೆ. ಮೊದಲು ಕೈಯನ್ನು ನೋಡಿದ ಶೇಷಗಿರಿಯ ದೃಷ್ಟಿ ಬಳಿಕ ನನ್ನ ಮುಖದತ್ತ ಹೊರಳಿತು.

"ನೀನೇನೋ. ಯಾವುದೋ ಗಿರಾಕಿ ಸಿಗುತ್ತೇಂತ ಇದ್ದೆ .......ಏನಪ್ಪ ದೊರೆ, ಎನ್ಸಮಾಚಾರ? ಹೆಂಡ್ತಿ ಸತ್ತೋರ ಹಾಗೆ ಮುಖ ಬಾಡಿಸ್ಕೊಂಡು ಇದೀಯಲ್ಲೊ!"

ನಾನು ಮುಗುಳು ನಕ್ಕೆ.

"ಮದುವೆ ಮಾಡ್ಕೋಬೇಕೊಂತ ಇರೋವರು ಹಾಗೆ ಅಮಂಗಳ ಮಾತಾಡ್ಬಾರದು ಕಣಯ್ಯ," ಎಂದೆ.

"ಸಾಕು ಬಿಡೂ ವೇದಾಂತ. ಮದ್ವೆ ಮಾಡ್ಕೊಳ್ಳೋದು ಅಂದ್ರೆ ಒಂದೇ ಸಾರಿ ದೊಡ್ಡ ಖರೀದಿ ಮಾಡ್ದಹಾಗೆ. ಹೆಂಡ್ತಿ ಸಾಯೋದೂಂ ತಂದ್ರೆ ಪಾಪರ್ ಎದ್ದ ಹಾಗೆ,"

"ಎಲ್ ಕಲ್ತೆ ಇದ್ನ? ಈ ಹೊಸ ಪೇಪರ್‌ನೋರು ಪ್ರಿಂಟು ಮಾಡಿದಾರೇನು?"

"ಪೇಪರಿನಲ್ಲೇನಿದಿಯೋ ಮಣ್ಣು! ಎಲ್ಲಾ ಇರೋದು ಇಲ್ಲಿ ಶೇಷಗಿರಿ ಮೆದುಳ್ನಲ್ಲಿ"

"ಹೂಂ?"

"ಹೌದು ಕಣಯ್ಯ. ನಾಳೆ ದಿವ್ಸ ನಾನೆ ಸ್ವತ: ಒಂದು ಪೇಪರ್ ತೆಗೀತೀನಿ ನೋಡ್ಕೊ."

ಶೇಷಗಿರಿ ಎಂದಾದರೊಮ್ಮೆ ಅಂತಹ ಗುಂಗಿನಲ್ಲಿರುತ್ತಿದ್ದ. ಆ ಲಹರಿಯಲ್ಲಿ ನನ್ನ ಸಂಕಟಗಳನ್ನೂ ನಾನು ತೇಳಿಬಿಟ್ಟೆ.

"ಭೇಷ್. ಅಂತೂ ಒಂದರೆಡು ಮೂರು ಸಾವಿರ ಮಾಡಿ ಇಟ್ಟಿದಿಯಾಂತನ್ನು ."