ಪುಟ:Vimoochane.pdf/೧೬೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

" ಯಾರೂ ಇಲ್ಲ ಕಣೋ. ಸುಮ್ ಸುಮ್ನೆ ನೋಡ್ದೆ."

ನಿಜ ಸಂಗತಿಯನ್ನು ನಾನು ಶೇಷಗಿರಿಗೆ ಹೇಳುವ ಹಾಗಿರಲಿಲ್ಲ. ಕಳೆದ ಒಂದು ಹಗಲು ಒಂದು ರಾತ್ರಿಯಲ್ಲಿ ನನಗಾದ ಅನುಭವ ಗಳನ್ನು, ನಾನು ಆತನಿಗೆ ತಿಳಿಯ ಹೇಳುವುದು ಸಾಧ್ಯವಿರಲಿಲ್ಲ. ಆ ಅನುಭವಗಳೆಲ್ಲಾ ನನ್ನವಾಗಿಯೇ, ನನ್ನೊಬ್ಬನ ಸೊತ್ತಾಗಿಯೇ, ಉಳಿಯಬೇಕಾಗಿತ್ತು.

ಆ ಹೋಟೆಲಿನಲ್ಲಿ ಕೊನೆಯದಾಗಿ ಉಳಿದಿದ್ದ ತಿಂಡಿಗಳನ್ನು ತಿಂದೆವು. ಕಾಫಿ ಕುಡಿದೆವು. ಹೊರ ಬರುತ್ತಾ ಶೇಷಗಿರಿ ಹಣವನ್ನು ತೆತ್ತ.

" ಎಲ್ಲಪ್ಪ ಒಂದು ರೂಪಾಯಿ ಸಾಲ ಕೊಟ್ಟಿರು."

ಅವನು ಚಿಲ್ಲರೆ ಹದಿನಾರು ಆಣೆಗಳನ್ನೆಣಿಸಿ ನನ್ನ ಕೈಗೆ ಕೊಟ್ಟ.

" ಇನ್ನೂ ಒಂದು ನಾಲ್ಕಾಣೆ ಕೊಡ್ಲೇನು?"

" ಬೇಡ ಇಷ್ಟು ಸಾಕು."

ನಾನು ಅವನನ್ನು ಬೀಳ್ಕೊಟ್ಟೆ.

.........ಬೀಡಿ ಸಿಗರೇಟಿನ ಅಂಗಡಿಗೆ ಹೋಗಿ ನನ್ನ ಜೀವನದ ಮೊದಲ ಪ್ಯಾಕೇಟನ್ನು ಕೊಂಡು ಕೊಂಡೆ, ರಾತ್ರಿಸಂಚಾರಿಯಾದ ನನ್ನ ಕೈಯಲ್ಲಿ ಬೆಂಕಿಯ ಪೊಟ್ಟಣ ಯಾವಾಗಲೂ ಇರುತ್ತಿತ್ತು. ಯಾವ ಅಳುಕೂ ಅಲ್ಲದೆ, ಸಿಗರೇಟನ್ನು ಬಾಯಿಗಿರಿಸಿ, ಅದಕ್ಕೆ ಬೆಂಕಿ ಹಚ್ಚಿದೆ. ಅಳುಕುವುದರಲ್ಲಿ ಅರ್ಥವಿರಲಿಲ್ಲ. ಸಿಗರೇಟು ಸೇದುವುದನ್ನೇ ಮಹಾ ಕೆಲಸವೆಂದು ಭಾವಿಸಿದರೆ, ಬೇರೆ ಏನು ಮಾಡುವುದು ಸಾಧ್ಯವಿತ್ತು.?

ಹೊಗೆಯುಗುಳುತ್ತ ನಾನು, ಆ ಚೌಕದತ್ತ ಹೋದೆ. ಪತ್ರಿಕೆ ಮಾರುವ ಹುಡುಗರಲ್ಲಿ ಹೆಚ್ಚಿನವರು ಮನೆಗೆ ಹೋಗಿದ್ದರು. ಯಾವನೋ ಒಬ್ಬ ಪುಟ್ಟ ಹುಡುಗ ಮಾತ್ರ ಮುಖ ಬಾಡಿಸಿಕೊಂಡು ನಿಂತಿದ್ದ.

ಆ ಚೌಕ! ನಾಲ್ಕು ವರ್ಷಗಳ ಹಿಂದೆ ನಾನು ಅಲ್ಲಿ ಪತ್ರಿಕೆ ಮಾರುತ್ತಿದ್ದೆ. ನಾಲ್ಕು ವರ್ಷಗಳ ಹಿಂದೆ ಅಲ್ಲೆ, ಮಾಡದೆ ಇದ್ದ ಅಪರಾಧಕ್ಕಾಗಿ ನನ್ನನ್ನು ಜೇಬುಗಳ್ಳನೆಂದು ಕರೆದಿದ್ದರು. ಆ ಚೌಕ!