ಪುಟ:Vimoochane.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. "ನಾನು, ಪಾಕೀಟು ಕದ್ದಿ ದೀನಿ ಅಪ್ಪಾ. ನಾನು ಪಾಕೀಟು ಕದ್ದಿದೀನಿ. ಅವತ್ತಲ್ಲ, ಈಗ. ಕದೀಬೇಕೊಂತ ನಾನಾಗಿ ಇಷ್ಟಪಡಲಿಲ್ಲ ಪಡಲಿಲ್ಲ, ಆದರೆ ಬೇರೆ ಹಾದೀನೇ ಇರಲಿಲ್ಲ ಆಪ್ಪ. ದೊಡ್ಡ ಮನುಷ್ಯ ಆಗೋದು ಸಾಧ್ಯವಾಗಲಿಲ್ಲ ಅಪ್ಪ".....

... ನಾನು ಮುಖ ಮುಚ್ಚಿಕೊಂಡು ಒಳಕ್ಕೆ ಓಡಿದೆ. ಅಳಲಿಲ್ಲ. ನಾನು ಅಳುವುದು ಸಾಧ್ಯವೇ ಇರಲಿಲ್ಲ.... ಹೊರಗೆ ತಂಗಾಳಿ ಬೀಸಿತು. ಬಲು ನಿಧಾನವಾಗಿ ಮನಸ್ಸಿನ ನೆಮ್ಮದಿ ಮರಳಿ ಬಂತು. ಮತ್ತೆ ದೀರ್ಘವಾದೊಂದು ಹಗಲು, ನೀಳವಾಗಿ ನನ್ನ ಮುಂದೆ, ಮೈ ಚಾಚಿ ಮಲಗಿತ್ತು. ಅದು ಮುಂಜಾವದಲ್ಲಿ ಕಾಣುವ ದೀರ್ಘವಾದ ಕರಿ ನೆರಳು. ಸಂಜೆಯೂ ಆ ನೆರಳು ಕಾಣಿಸುವುದು. ಆದರೆ ಅದು ಮೈ ಚಾಚಿದ ದೀರ್ಘವಾದ ಕತ್ತಲೆಯ ಸಂಕೇತ.

ಒಳ ಮನೆಯಲ್ಲಿ ತಣ್ಣನೆ ನೆಲದ ಮೇಲೆ ನಾನು ಮಲಗಿದೆ. ನುಣುಪಾಗಿತ್ತು ಆ ನೆಲ. ಪುಟ್ಟದಾದೊಂದು ನಯವಾದ ಕಲ್ಲನ್ನು ನೆಲದ ಮೇಲೆ ತೀಡಿ ಸಾರಣೆ ಮಾಡಿ ಆ ನೆಲವೆಲ್ಲಾ ನುಣು ಪಾಗುವ ಹಾಗೆ ಅಜ್ಜಿ ಮಾಡಿದ್ದಳು ನೆಲವೂ ನುಣುಪಾಗಿತ್ತು. ತೀಡಿ ತಿಕ್ಕಿ ಆ ಕಲ್ಲೂ ನುಣುಪಾಗಿತ್ತು. ತೀಡಿ ತಿಕ್ಕಿ, ಸವೆದು ಹೋದ ಆ ಕಲ್ಲು ಮತ್ತು ಹಾಗೆಯೇ ಸವೆದು ಹೋದ ಆ ಜೀವ.....

ಬರಿ ಹೊಟ್ಟೆಯಲ್ಲೆ ಮಲಗಿದ್ದೆನಾದರೂ ನಿದ್ದೆ ಬಂತು. ಎಚ್ಚೆ ತ್ತಾಗ, ನಡು ಹಗಲು ದಾಟಿರಬೇಕು...... ಆ ಮೇಲೆ ಊಟದ ಬೇಟೆ. ಅಜ್ಜಿ ಮಾಡಿದ ಅಡುಗೆಯಲ್ಲ, ಶೀಲಳ ಕೈ ಅಡುಗೆಯಲ್ಲ. ಯಾವುದೋ ಅಯ್ಯರ್ ಮಾಣಿಯ ಹುಳಿ ಸಾರು. ಇಲ್ಲವೆ ಯಾವುದೋ ಮಲ ಬಾರು ಹುಡುಗನ ಬಿರಿಯಾಣಿ-ಚಾಪೀಸು.

ಹೇಗೋ ಹೊಟ್ಟೆ ತುಂಬಿಸಿಕೊಂಡೆ. ಕಳವಾಗಿದ್ದ ರೇಜರ್ ಸೆಟ್ಟಿನ ಬದಲು ಇನ್ನೊಂದನ್ನು ತಂದೆ. ಆ ಪೋಷಾಕಿಗೆ ಕೈ ಇಸ್ತ್ರಿ. ಷೂಗಳಿಗೆ ಕಾಗದದ ಚೂರಿನಿಂದ ಧೂಳೊರೆಸುವ ಪಾಲೀಶು......