ಪುಟ:Vimoochane.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ದಿನವನ್ನಲ್ಲ, ಮರು ದಿನವನ್ನು ನನ್ನ ಹುಟ್ಟು ಹಬ್ಬವನ್ನಾಗಿ

ಆಚರಿಸಿದೆವು. ಕಳವು ಮಾಡಿದ್ದ ಮೂರು ಸೈಕಲುಗಳನ್ನು ಮಾರಿ ಹೊಸದೊಂದನ್ನು ಕೊಂಡು ತಂದು ನನಗೆ ಉಡುಗೊರೆ ಕೊಟ್ಟರು.

ನನ್ನನ್ನು ಬಾಷಾ ಎಂದು ಕರೆಯುತ್ತಿದ್ದವನು ಹೇಳಿದ:

"ಹುಟ್ಟು ಹಬ್ಬಕ್ಕೆ ಇಷ್ಟಾಯಿತು. ಬಾಷಾ ಏನಾದರೂ

ಉಸ್ತಾದ್ ಹಾಗೆ ಸಂಸಾರ ಗಿಂಸಾರ ಮಾಡ್ಕೊಳ್ಳೋ ಹಾಗಿದ್ದರೆ ಒಂದು ಮೋಟಾರ್ ಕಾರ್ನೇಯ--"

"ಓ!ಹಾಗಾದರೆ ಈಗಲೇ ಯಾರನ್ನಾದರೂ ಕರ್ಕೆಂಡು

ಬರ್ತೀನಿ."

......ಅಂತಹ ಮಾತು ಹಗುರವಾಗಿತ್ತು. ಅದಕ್ಕೆ ಅರ್ಥವಿರ

ಲಿಲ್ಲ. ಆದರೂ ನಾನು ಒಬ್ಬನೇ ಉಳಿದಾಗ ಮನಸ್ಸು ಎಲ್ಲೆಲ್ಲೋ ಅಲೆಯುತಿತ್ತು. ಆ ಚಲಂ ಸಂಗಡಿಗರು ಕುಡಿಯುತ್ತಲಿದ್ದರು. ಸೊಳೆ ಗೇರಿಗೆ ಹೋಗಿ ಬರುತಿದ್ದರು. ಬಾಯಾರಿದಾಗ ಬೀದಿ ಕೊಳಾಯಿಗೆ ಕೈಯೊಡ್ಡಿದ ಹಾಗಿರುತಿತ್ತು--ಅವರು ಹೆಣ್ಣನ್ನು ಬಯಸುತ್ತಿದ್ದ ರೀತಿ.

ಆದರೆ, ಚಲಂ ? ಅವನೇ ಹೇಳಿದಂತೆ ಹಿಂದೆ ಆತ,

ಯಾವುದೋ ಸಮಾಧಾನಕ್ಕಾಗಿ, ದೊರೆಯದ ಯಾವುದೇ ತೃಪ್ತಿ ಗಾಗಿ, ಸ್ತ್ರೀಯನ್ನು ಬಯಸುತಿದ್ದ. ಹಲವು ವರ್ಷಗಳ ಅಂತಹ ಜೀವನ ಅವನಿಗೆ ಸಮಾಧಾನವನ್ನೂ ತಂದಿರಲಿಲ್ಲ, ತೃಪ್ತಿಯನ್ನೂ ತಂದಿರಲಿಲ್ಲ. ಅದರ ಫಲವಾಗಿಯೇ, ನಂಬಿ ಬಂದ ಸಾವಿತ್ರಿಯೊಡನೆ ಆತ ಸಂಸಾರ ಹೂಡಿದ.

ನನಗೆ ಅಂತಹ ಬಯಕೆಗಳಾಗುತ್ತಿರಲಿಲ್ಲ. ಆದರೆ ಪೂರ್ಣತೆಯ

ಕಡೆಗೆ ಮಾನವ ಹೋಗುವುದೆಂದರೇನು? ಜೀವನದಲ್ಲಿ ಆತನಿಗೆ ಇರ ಬೇಕಾದ ಗುರಿ ಯಾವುದು? ಈ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದಾಗ ಹೆಣ್ಣು ಗಂಡಿನ ಸಮಸ್ಯೆ ನನ್ನನ್ನು ಕಾಡುತ್ತಿತ್ತು.ಆದರೆ ನನಗೊಂದೂ ಅರ್ಥವಾಗುತ್ತಿರಲಿಲ್ಲ. ನಾನು ಆ ಯೋಚನೆಯನ್ನೇ ಬಿಟ್ಟು ಕೊಡು ತ್ತಿದ್ದೆ.

ಬಿಡುವಿನ ಅವಧಿಯೆಲ್ಲಾ ಪುಸ್ತಕಗಳ ಸಂಗದಲ್ಲಿ ಕಳೆದು