ಕಾದಿದ್ದ ಹೊಸ ಸಾಹಸವನ್ನು ಇದಿರ್ಗೊಳ್ಳಲು ನಾನು ಮುಂದಾದೆ.
ಹೋಟೆಲಿನ ಬಳಿ ಹೋಗಿ, ಸೈಕಲನ್ನು ಅಲ್ಲೇ ಇರಿಸುವ
ಏರ್ಪಾಟು ಮಾಡಿ, ಆ ಹುಡುಗನೊಡನೆ ಟಾಕ್ಸಿ ಏರಿದೆ.
ಆತ ಮನೆಯ ವಿಳಾಸ ಹೇಳಿದ. ನನ್ನ ತೋಳಿನ ಆಧಾರ
ಅವನಿಗೆ ಬಲು ಹಿತಕರವಾಗಿತ್ತು.
"ಸಾರ್, ನೀವು ನಿಮ್ಮ ಹೆಸರು ಹೇಳಲೇ ಇಲ್ಲ."
"ನೋಡಿ, ನಾವಿಗ ಸಾಕಷ್ಟು ಸ್ನೇಹಿತರಾಗಿದ್ದೇವೆ. ಒಂದೇ
ಓರಗೆಯವರು ಬೇರೆ. ಸಾರ್-ಸಾರ್ ಅನ್ಬಾರ್ದು."
"ಸರಿ ಸಾರ್."
"ಮತ್ತೆ ಅದೇ !... ಹುಂ..ನನ್ನ.... ಹೆಸರು ರಾಧಾಕೃಷ್ಣ.....
ಸ್ನೇಹಿತರು ಕೂಗೋದು ರಾಧಾ ಎಂತ."
ಆ ಕಾಹಿಲೆಯ ಮನುಷ್ಯ ನಕ್ಕ
.
"ನಗ್ತೀನಿ ಅಂತ ಕೋಪಿಸ್ಕೋಬೇಡಿ, ವನಜಾ ಸ್ನೇಹಿತೆ
ಒಬ್ಳಿದಾಳೆ. ಅವಳ ಹೆಸರೂ ರಾಧಾ ಎಂತ.”
"ವನಜ ? ಯಾರು ವನಜ ?"
"ವನಜ ಬರ್ತಿನಿಂತಂದ್ಳು ಅಂತ ಆಗಲೇ ಹೇಳಿದ್ದೆಲ್ಲ...ವನಜ
ನನ್ತಂಗಿ, ಈ ವರ್ಷ ಇಂಟರ್'ಗೆ ಕಟ್ಟಿದ್ದಾಳೆ. ಆ ಮೇಲೆ ಬಾಟನಿ ಆನರ್ಸ್ ತಗೋತಾಲಂತೆ, ಇಂಗ್ಲೆಂಡಿಗೆ ಹೋಗ್ಬಂದು ವಿಜ್ಞಾನಿ ಆಗ್ತಾಳಂತೆ !"
ಎರಡು ನಿಮಿಷ ಸುಮ್ಮನಿದ್ದೆ. ಟ್ಯಾಕ್ಸಿ ಮನೆ ಸೇರಿದಾಗ ನಾನು
ಕಾಣಲಿದ್ದ ವನಜಳನ್ನು ಚಿತ್ರಿಸಿಕೊಂಡೆ. ಪುಟ್ಟ ಹುಡುಗಿ.. ಫೂ ಎಂದು ಊದಿದರೆ ಗಾಳಿಗೆ ಹಾರಿ ಹೋಗುವಂತಹ ಶರೀರ. ಬಿಳಿಚಿ ಕೊಂಡ ಮುಖ. ಕುರುಚಲು ಜಡೆ. ಕಣ್ಣುಗಳು? .....ಕೊರಳಿನ ಸರದ ಲಾಕೆಟಿನಲ್ಲಿ ಮೇಡಂ ಕೂರಿಯ ಚಿತ್ರ ಬೇರೆ!.
ಕಲ್ಪನೆ ಸಾಕೆಂದು, ವನಜಳ ಅಣ್ಣನನ್ನು ಮಾತನಾಡಿಸಿದೆ:
"ನಿಮ್ಮ ತಂದೆ—"
"ವಕೀಲರು, ಶ್ರೀನಿವಾಸಯ್ಯ ಎಂತ ಕೇಳಿದೀರಾ?"