ಪುಟ:Vimoochane.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಟ್ಯಾಕ್ಸಿ ಗೀಕ್ಸಿ ಬೇಕೇನು ತಮಗೆ?"

ಆತನ ಕಣ್ಣುಗಳಲ್ಲಿ ಬಂಜೆ ಕ್ರೋಧ ಮಿನುಗಿತು.ಕುಳಿತಲ್ಲಿಂದ ಎದ್ದು, ಉತ್ತರವೀಯದೆ ಅವನು ಹೊರಟು ಹೋದ.

ಬಿರುಗಾಳಿಗೆ ಬುಡ ಸಹಿತ ಕಿತ್ತು ಹೋದ ಮರ... ಹರಿತ ವಾದ ಕತ್ತಿಗೆ ಸಿಕ್ಕಿ ಬರಿ ಮುಂಡವಾದ ಬಾಳೆ.....ಯಾರೋ ಕೊಯ್ದು ಹಿಚುಕಿದ್ದ ಬಿಳಿಯಗುಲಾಬಿ.....

ತತ್ತರಿಸುತಿದ್ದರೂ ನಾನು ಉಸಿರಾಡಲು ಯತ್ನಿಸಿದೆ.

ಮನಸಿನ ಕಾಹಿಲೆ ದೇಹದ ಕಾಹಿಲೆಯಾಗಿ ಮಾರ್ಪಟ್ಟ ಆ ಅನುಭವ. ಆಗ ನಾನು ಕೊರಡಿನಂತೆ ಬಿದ್ದಿರುತಿದ್ದೆ,ಘಂಟೆ ಘಂಟೆ ಗಳ ಕಾಲ. ಮೈ ಕಾವೇರುತಿತ್ತು ಆರುತಿತ್ತು. ನಾಲಿಗೆಗೆ ರುಚಿ ಇರಲಿಲ್ಲ.ಬದುಕುವುದರಿಂದ ಏನು ಪ್ರಯೋಜನವಿತ್ತು? ಸಾವು ಸದ್ದಿಲ್ಲದೆ ಬಂದು ಕಣ್ಣೆವೆಗಳನ್ನು ಮೆಲ್ಲನೆ ಮುಚ್ಚಿದ್ದರೆ ನಾನು ಬೇಡ ವೆನ್ನುತ್ತಿರಲಿಲ್ಲ. ಇಪ್ಪತ್ತಾರು-ಎಪ್ಪತ್ತೇಳನೆಯ ಆ ವಯಸ್ಸಿನಲ್ಲಿ ಮೊದಲ ಮರಣ ದಾಹ....

ನಾನು ಸಾಯಲಿಲ್ಲ. ಸಾಯುವುದರಲ್ಲಿ ಅರ್ಥವಿರಲಿಲ್ಲ.

ಹೃದಯ ತೋಡಿಕೊಂಡು ದೀರ್ಘ ಕಾಗದವೊಂದನ್ನು ವನಜ ಳಿಗೆ ಬರೆದೆ. ಆದರೆ ಅದನ್ನು ಅಂಚೆಗೆ ಸೇರಿಸಲಿಲ್ಲ; ಕಳುಹಿಕೊಡಲಿಲ್ಲ. ಅವರ ಅಡುಗೆಯ ಹುಡುಗನನ್ನು ಕಂಡು ಮಾತನಾಡಿಸಬೇಕೆಂದು ತರಕಾರಿಯ ಮಾರುಕಟ್ಟೆಯಲ್ಲಿ ಕಾದುನಿಂತೆ. ಹುಡುಗ ಬರುತಲಿದ್ದ; ನಾನು ಅವನನ್ನು ನೋಡುತ್ತಲೂ ಇದ್ದೆ; ಆದರೆ ಮಾತನಾಡಿಸಲಿಲ್ಲ ಮಾತ್ರ. ಆ ಬಳಿಕ ಸ್ವತಃ ನಾನೇ ವನಜಳನ್ನು ಕಾಣಬೇಕೆಂದು ಎರಡು ಬಾರಿ ಆ ಮನೆಯಿದೆ ಪ್ರದೇಶಕ್ಕೆ ಹೋದೆ. ಆದರೆ ಮನೆಯನ್ನು ಮಾತ್ರ ಸಮಿಪಿಸಲಿಲ್ಲ.

ದಿನವೂ ಬ್ಲೇಡು ಕಾಣುತ್ತಿದ್ದ ಗಲ್ಲಗಳು ದೊರಗು ಗಡ್ಡದಿಂದ ಮುಚ್ಚಿಕೊಂಡುವು. ಕ್ರಾಪು ಅಸ್ತವ್ಯಸ್ತವಾಗಿ ಅಂದಗೆಟ್ಟಿತು. ಬಟ್ಟೆ ಬರೆಗಳು ಮಲಿನವಾದುವು.

ಚಲಂ ಬಳಗದವರು ಕೇಳುತಿದ್ದರು: