ಪುಟ:Vimoochane.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಷ್ಟೋ ದಿನ ನಾನು ಮುಖ ಕ್ಷೌರಮಾಡಿಕೊಳ್ಳುತಿರಲಿಲ್ಲ. ಬಟ್ಟೆಗಳು ಮಾಸಿರುತಿದ್ದುವು. ಪ್ರೇತಕಳೆಯಿತ್ತು ಮುಖದ ಮೇಲೆ. ಮಾನವ ರಿಂದ ದೂರ ಹೋಗಲು ನಾನು ಬಯಸುತಿದ್ದೆ. ಮನುಷ್ಯರು ಯಾರ ಸಹವಾಸವೂ ನನಗೆ ಬೇಕಾಗಿರಲಿಲ್ಲ.

ಅದರ ಬದಲಾಗಿ ನಾನು ಬಾಟಲಿಯ ಸಹವಾಸಮಾಡಿದೆ. ಮುಗುಳು ನಗು ಬರಿಸಿದ ಮೊದಲ ಗುಟುಕು.....ಆ ಬಳಿಕ ಎಂದಿಗೂ ತೃಪ್ತಿಕೊಡದೇ ಹೋದ ಬರಿದು ಬಾಟಲಿಗಳು.......ದುಡ್ಡಿನ ಪ್ರಮಾ ಣಕ್ಕೆ ಅನುಸಾರವಾಗಿ ಬಾಟಲಿಯ ಗುಣವಿರುತಿತ್ತು. ಹಣದ ಪರಿ ಮಾಣ ಹೆಚ್ಚುತಿತ್ತು ದ್ರಾವಕದ ಗುಣ. ಕುಡಿತ ಅಧಃಪತನದ ಚಿಹ್ನೆ ಎಂದು ಆರೋಪಿಸುವವರಿದ್ದಾರೆ. ಅದು ನನ್ನ ಅಭಿಪ್ರಾಯವಲ್ಲ. ಒಳ್ಳೆಯ ಮನುಷ್ಯರು ಹಾಗೆ ಹೇಳ ಬಹುದು. ಆದರೆ ನಾನು ಒಳ್ಳೆಯ ಮನುಷ್ಯನೆಂದು ಯಾವ ದಿನ ಸಾಧಿಸಿದ್ದೆ? ಇನ್ನೊಬ್ಬರ ಸಂಪಾದನೆಯಿಂದ ಒಂದಂಶವನ್ನು ಕಸಿದು ಜೀವಿಸಿದ ನಾನು ಒಳ್ಳೆಯವನೆಂದು ಹೇಳುವುದು ಹೇಗೆ ಸಾಧ್ಯ?

ಜನ, ಯುದ್ದದ ಮಾತನ್ನಾಡುತಿದ್ದರು. ಜಗತ್ತನ್ನು ಆವರಿಸಿದ ಎರಡನೆಯ ಘೋರ ಮಹಾಯುದ್ಧ. ಒಂದು ವರ್ಷ, ಎರಡು ವರ್ಷ,... ಯಾರು ಯಾರೋ ಎಲ್ಲೋ ಕಾಳೆಗ ನಡೆಸಿದ್ದರು. ಬಾಂಬು- ಅಗ್ನಿ ವರ್ಷ- ಟ್ಯಾಂಕು ತೋಫುಗಳು- ಮೃಗಮಾನವರು. ಪ್ರಜಾಪ್ರಭುತ್ವದ ಸ್ವಾತಂತ್ರ್ಯದ ಮಾತುಗಳು ಕೇಳಿ ಬರುತಿದ್ದುವು- ಅರ್ಥವಿಲ್ಲದ ಮಾತುಗಳು.

ಆದರೆ ಬೀದಿಗಳಲ್ಲಿ ಖಾಕಿ ಜವಾನರು ಓಡಿಯಾಡುತ್ತಿದ್ದರು. ಯಾವುದೋ ದೇಶಗಳ ಬಿಳಿಯ ಸೈನಿಕರು ನಮ್ಮ ಗಲ್ಲಿಗಳನ್ನು ಗಲೀಜು ಮಾಡುತಿದ್ದರು. ಅವರು ಮನುಷ್ಯರಾಗಿರಲಿಲ್ಲ. ಹಾಗೆಂದೇ ಅವರ ಸಮಾಪ್ಯದಲ್ಲಿದ್ದು ಸಮಯ ಕಳೆಯಬೇಕು ಎನಿಸುತಿತ್ತು. ಆದರೆ ಅದಕ್ಕೆ ಅವಕಾಶವಿರಲಿಲ್ಲ. ನಾನು ಮಿಲಿಟರಿ ಸೇರಿದರೆ? ಮಿಲಿಟರಿ ಸೇರುವುದರಿಂದ ನನ್ನ ವೈಯುಕ್ತಿಕ ಸಮಸ್ಯೆ ಪರಿಹಾರವಾಗುವುದಲ್ಲವೆ?...... ಆದರೆ ಪೋಲೀಸರು ಫೈಲು ಸಿದ್ಧಗೊಳಿಸಿರುವ ನನ್ನಂಥವನಿಗೆ ಖಾಕಿ.