ಪುಟ:Vimoochane.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಟ್ಟೆಯ ರಕ್ಷಣೆ ದೊರೆಯುವುದು ಸಾಧ್ಯವಿರಲಿಲ್ಲ..... ದಿನಕಳೆದಂತೆ ಸೈನ್ಯದ ಕರೆ ಮಾತ್ರ ಹೆಚ್ಚು ಹೆಚ್ಚಾಗಿ ಕೇಳಿಸು ತಿತ್ತು. ದೇಶದ ಸ್ವಾತಂತ್ರ್ಯದ ಹೆಸರಲ್ಲಿ ಜನಯುದ್ಧದ ಹೆಸರಲ್ಲಿ ಆ ಕರೆ ಬರುತಿರಲಿಲ್ಲ. ನನ್ನ ಪಾಲಿಗೆ ಅದು ಸಾವು ಎಸೆಯುತಿದ್ದ ಸಮ್ಮೋಹನಾಸ್ತ್ರ. ಆಳವರಿಯದ ಆ ನೀರಿಗೆ ಇಳಿದು ಬಿಡಲು ಮನ ಸಾಗುತಿತ್ತು. ಹಾಗೆ ಮಾಡಬೇಕಾದರೆ ತಲೆ ಮರೆಸಿಕೊಂಡು ಬೇರೆ ಊರಿಗೆ ಸುಳ್ಳು ಹೇಳಿ ಸೈನ್ಯ ಸೇರಬೇಕು......

ಮತ್ತೆಯೂ ನಾಲ್ಕು ದಿನ ಅವಕಾಶ ದೊರೆತಿದ್ದರೆ ಹಾಗೆಯೇ ಮಾಡುತಿದ್ದೆನೇನೋ. ಆದರೆ-

ಸಿಗರೇಟಿನ ಹೊಗೆಯ ತೆರೆಯ ಹಿಂದೆ ಮುಖ ಮರೆಸಿ, ಆ ಬಾರ್ ನಲ್ಲಿ ಕುಳಿತಿದ್ದ ನನಗೆ ಕರೆ ಬಂತು:

"ಚಂದ್ರೂ........."

ಎಷ್ಟು ಒತಕರವಾಗಿತ್ತು ಆ ಸಂಬೋಧನೆ! ಎಂಥ ದೀರ್ಘ ಅವಧಿಯ ಬಳಿಕ ಆ ಪದೋಚ್ಚಾರಣೆಯನ್ನು ಕೇಳುತ್ತಿದ್ದೆ! "ಚಂದ್ರೂ!"

ನಾನು ಉತ್ತರವೀಯಲಿಲ್ಲ. ಮತ್ತೊಮ್ಮೆ ಆ ಹೆಸರನ್ನು ಕೇಳುವ ಭಾಗ್ಯ ನನ್ನದಾಗಬಾರದೆ?

ಈ ಸಾರೆ ಬಲು ಹತ್ತಿರದಲ್ಲೆ ಸ್ವರ ಕೇಳಿಸಿತು.

"ಚಂದ್ರೂ!"

"ಆಂ?"

ಅವನು ನಗುತ್ತಿದ್ದ- ಶ್ರೀಕಂಠ.

"ಸೈತಾನ ಕಣೋ ನೀನು. ಈ ದೇಶದಲ್ಲೇ ನೀನಿಲ್ಲಾಂತಿದ್ದೆ. ಅಂತೂ ಸಿಕ್ದೆ"

"ಬಾ ಕಂಠಿ."

ಹಾಗೆ ನಾನು ಸಲಿಗೆಯಿಂದ ಇನ್ನೊಬ್ಬರನ್ನು ಕರೆಯದೆ ಬಹಳ ದಿನಗಳಾಗಿದ್ದುವಲ್ಲವೆ? ವನಜಾ-ವನೂ; ಶ್ರೀಕಂಠ-ಕಂಠಿ......

ಆತ ಕುಳಿತುಕೊಂಡ.