ಪುಟ:Vimoochane.pdf/೨೮೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಯಾರಿಗೂ ಇಲ್ಲದ ಸ್ವಾತಂತ್ರ್ಯ ನಿನಗಿದೆ. ಹೇಳು."

"ಇಂಥ ಕುಡಿತದಿಂದ ಹಿತವಿಲ್ಲ. ನಿನ್ನ ಆರೋಗ್ಯದ ಗತಿ ಏನು? ನಾಳೆ ಏನಾದರೂ ಆದರೆ?"

"ಏನು ಆಗೋದು? ಸುಮ್ನಿರು ಚಂದ್ರೂ........ನಾಳೆಯ ಯೋಚ್ನೆ ನನಗಿಲ್ಲ. ಈ ಪ್ರಪಂಚ್ದಲ್ಲಿ ಇರ್ಬೇಕಾದಷ್ಟು ದಿನ ಜರ್ಬಿನಲ್ಲೇ ಇರ್ತೀನಿ."

ನಾಳೆಯ ಯೋಚನೆ ನನಗೂ ಇರಲಿಲ್ಲ. ನನ್ನ ಆರೋಗ್ಯದ ಬಗೆಗೆ ನಾನೂ ಆಸಕ್ತಿ ವಹಿಸುತಿರಲಿಲ್ಲ. ಆದರೆ ಆ ಜೀವ ಸಂಕಟಪಡು ತಿದ್ದುದನ್ನು ಕಂಡಾಗ ಏನನ್ನಾದರೂ ಹೇಳಬೇಕೆನಿಸುತಿತ್ತು...........

ನನ್ನ ಆರೋಗ್ಯ ವನಜಳ ಪ್ರಕರಣವಾದ ಮೇಲೆ ಆ ಹೊಟ್ಟೆಯ ಬಾಧೆ ನನಗೆ ತಗಲಿರಬೇಕು. ವನಜಳಿಗೂ ಅದಕ್ಕೂ ಸಂಬಂಧವಿತ್ತು ಎಂದರೆ ಯಾರಾದರೂ ನಗಬಹುದು. ಅಂಥದೇನೂ ಇರಲಿಲ್ಲ. ಅದರೆ ಆ ವರೆಗಿನ ನನ್ನ ಜೀವನಕ್ರಮ, ಸಣ್ಣ ಪ್ರಮಾಣದ ಉಡುಗೊರೆ ಯಾಗಿ ಆ ಕರುಳಿನ ಕಾಯಿಲೆಯನ್ನು ನನಗೆ ಕೊಟ್ಟಿತು. ಆ ಮೇಲೆ ಒಂದರ ಬಳಿಕ ಒಂದಾಗಿ ಹಲವು ವರ್ಷಗಳು. ಅಸಲು ಬಡ್ಡಿ ಸೇರಿ, ಬಡ್ಡಿಗೆ ಬಡ್ಡಿಯಾಗಿ, ಕಾಹಿಲೆ ಬೄಹತ್ ರೂಪ ತಾಳುತಿತ್ತು. ನಾನು ಅದನ್ನು ಗಮನಿಸುತಿರಲಿಲ್ಲ. ನನಗೆ ಅದರ ಗೊಡವೆ ಇರಲಿಲ್ಲ.

ಮಿಲಿಟರಿಗೆ ಸಾಮಾನು ಪೂರೈಕೆ ನಿಂತಿತು. ಕಾರಖಾನೆಯಲ್ಲೂ ಒಂದು ಪರಿಮಿತಿಯೊಳಗೆ ಮಾತ್ರ ಲಾಭ ಬರುವುದು ಆರಂಭವಾಯಿತು.

ಅಷ್ಟಿದ್ದರೂ ಅದು ಕಡಿಮೆ ಲಾಭವೇನೂ ಆಗಿರಲಿಲ್ಲ.

..........ಅಂಥ ಒಂದು ದಿನ ಶ್ರೀಕಂಠ ಮತ್ತು ನಾನು ಬಲು ಸಂಭ್ರಮದಿಂದ ಹೊತ್ತು ಕಳೆದೆವು.

ಆ ಸಂಜೆ ಶ್ರೀಕಂಠ ಕೇಳಿದ:

"ಗೊತ್ತಿದೆಯೇನೋ?"

"ಹೂನಪ್ಪಾ, ಪತ್ರಿಕೇಲಿ ಓದಿದೀನಿ."

"ಇವತ್ತು ನಡು ರಾತ್ರೆ ದಾಟಿದ್ಮೇಲೆ ನಾವು ಸ್ವತಂತ್ರರು!"