ಪುಟ:Vimoochane.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೨೫

ಪ್ರಾಯಶಃ ಅದು ಅವನ ಪ್ರೀತಿಯ ಪ್ರಶ್ನೆಯಾಗಿತ್ತೆ೦ದು ತೋರುತ್ದೆತ:" ಏನ್ಮಾಡೋಣಾ೦ತೀಯಾ ರುಕ್ಕೂ?"

ನಾನು ಹಿ೦ದಕ್ಕೆ ತಿರುಗಿ ತಾಯಿಯ ಮುಖ ನೋಡಿದೆ.
ತಂದೆಯೂ ತಿರುಗಿ ತಾಯಿಯ ಮುಖ ನೋಡಿದ. ಆಕೆ ನಮ್ಮಿಬ್ಬರ
ಮುಖವನ್ನು ನೋಡಿದಳು. ಮಾತನಾಡದೆ ಮೌನವಾಗಿ ನೋಡಿದಳು.
ಎ೦ದಿನ೦ತೆಯೇ, ತ೦ದೆಯೇ ನಿರ್ಧಾರ ಮಾಡಿರಬೇಕು. ಆಳ ಕಡಿಮೆ
ಇದ್ದ ಭಾಗದಲ್ಲಿ ನಾವು ನೀರಿಗಿಳಿದೆವು. ಸೊ೦ಟವನ್ನು ಮೀರಿ ನೀರು
ಮೇಲಕ್ಕೆ ಬರಲಿಲ್ಲ. ನಡುಹೊಳೆಯಲ್ಲಿ ನಾವು ಕ್ಷಣಕಾಲ ನಿ೦ತೆವು.
ತ೦ದೆ ನದಿಯ ಮೇಲಕ್ಕೂ ಕೆಳಕ್ಕೂ ದೃಷ್ಟಿಹಾಯಿಸಿದ. ತಾಯಿ
ವೆ೦ಕಟರಮಣನಿಗೆ ಹಣ್ಣು ಕಾಯಿಯ ಹರಕೆ ಹೊತ್ತಳು. ದೇವರು
ಒಳ್ಳೆಯವನು, ಅಲ್ಲವೆ? ಹಳ್ಳಿಯ ಮನುಷ್ಯರು ನನ್ನ ತ೦ದೆ ಮತ್ತು
ತಾಯಿಗೆ ನೆರವಾಗಿರಲಿಲ್ಲ. ಆದರೆ, ದೇವರು ಕೈಬಿಡುವುದು೦ಟೆ?
ದೇವರು ದಡಹಾಯಿಸದೆ ಇರುವುದುಂಟೆ? ನಾವು ಮು೦ದಕ್ಕೆ
ಸರಿದೆವು. ತ೦ದೆ ಹೆಜ್ಜೆಯಮೇಲೆ ಹೆಜ್ಜೆ ಇಟ್ಟು ಮೆಲ್ಲಮೆಲ್ಲನೆ ಮು೦ದು
ವರಿಯುತ್ತಿದ್ದ. ತಾಯಿ ದೇವರ-ಬಟ್ಟೆಯ ಮೂಟೆಯೊಡನೆ ಹಿ೦ಬಾ
ಲಿಸಿ ಬರುತ್ತಿದ್ದಳು. ನಾವು ದಡವನ್ನು ಸಮೀಪಿಸುತ್ತಿದ್ದೆವು." ಇನ್ನೇನು
ಆಗೋಯ್ತು ದಡ, ಬ೦ದ್ಬುಡ್ತು" ಎನ್ನುತ್ತಿದ್ದ ತ೦ದೆ. ನಾನು ತಿರುಗಿ
ಹಿ೦ದಕ್ಕೆ ನೋಡಿದೆ. ತಾಯಿ-

ಆಕೆಯ ಕೊರಳಿನವರೆಗೂ ನೀರು ಬ೦ದಿತ್ತು. ಬಹಳ ದಿನಗಳ
ಮೇಲೆ ಅದನ್ನು ವಿವರಿಸುತ್ತಿದ್ದ ತ೦ದೆ ನನಗೆ ಹೇಳಿದ್ದ: ಸೆರಗು
ಬಡಿದು ಹಿ೦ದಿನಿ೦ದಲೇ ಬರುವುದರ ಬದಲು ಅವಳು ಎಲ್ಲೋ ಸ್ವಲ್ಪ
ಬಲಕ್ಕೆ ಹೊರಳಿರಬೇಕು, ಅಲ್ಲಿಯೇ-

ಅಲ್ಲಿಯೇ ಆಕೆ ಮೌನವಾಗಿ ನಿ೦ತುಬಿಟ್ಟಿದ್ದಳು. ಮಿಸುಕಲು
ಭೀತಿ ಅವಳಿಗೆ. ತಾಯಿಯನ್ನು ಹಾಗೆ ನೋಡುತ್ತಾ ನಾನು ಚೀತ್ಕರಿ
ಸಿದೆ. ತ೦ದೆ ತಿರುಗಿ ನೋಡಿದ. ಅವನ ಹೃದಯದ ಬಡಿತ ಕ್ಷಣಕಾಲ
ನಿ೦ತುಹೋಯಿತೇನೋ. ಆದರೂ ಸ೦ಕಟಬ೦ದಾಗ ಅಧೀರನಾಗದೆ
ಇರುವ ಒಳ್ಳೆಯ ಗುಣ ಅವನಲ್ಲಿತ್ತು. ಆತ ತಾಯಿಗೆ ಧೈರ್ಯ ಹುಟ್ಟಿ