ಪುಟ:Vimoochane.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೮

ವಿಮೋಚನೆ

ದೀನಿ.....ಈಗ ಬೇಡ......"

ನನ್ನ ಬಗ್ಗೆ ನನಗೆ ನಾಚಿಕೆಯಾಗಿತ್ತು. ಹೇಗಾಗಿದ್ದವನು
ಹೇಗಾದೆ! ಹೇಗೆ ಆಗಬೇಕಾಗಿದ್ದವನು ಯಾವ ಸ್ಥಿತಿಗೆ ಬಂದು
ತಲಪಿದೆ!

ಕಮಲೆಗಾಗಿ ಏನಾದರೂ ನಾಣಿ ಕೈಯಲ್ಲಿ ಕಳುಹಿಕೊಡುವ
ಮನಸ್ಸಾಯಿತು. ಆದರೆ ನನಗೆ ಆ ಅಧಿಕಾರವಿತ್ತೆ? ಹಣ ಕೊಟ್ಟು
ಹೆಣ್ಣುಗಳ ಮೈಮುಟ್ಟಿದ ನಾನು, ದೇವಿಯಂಥ ಆ ಜೀವದ ಬಗ್ಗೆ
ಕನಿಕರ ವ್ಯಕ್ತಪಡಿಸುವ ಅರ್ಹತೆಯನ್ನಾದರೂ ಉಳಿಸಿಕೊಂಡಿದ್ದೆನೆ?

......ಕರುಳು, ಕಿತ್ತು ಬರುವಂತೆ ಸಿಡಿಯುತ್ತಿತ್ತು....ಹೃದಯ, ಹಲವು ಆಘಾತಗಳಿಂದ ಜರ್ಜರಿತವಾಗಿತ್ತು.....ಸಂಕಟ...

ಮರುದಿನ ಕಂಡಾಗ ಕೃಷ್ಣರಾಜರು ನನ್ನನು ಮರುಳುಗೊಳಿಸಿ
ದರು.ಎಲ್ಲ ವ್ಯಕ್ತಿಗಳನ್ನೂ ತನ್ನ ಸಮಾನರೆಂದೇ ಕಾಣುವ
ಆ ಹಿರಿತನ....

"ಅದು ಚಿನ್ನದಂಥ ಕತೆ ಸಾರ್."

" ನಿಮ್ಮ ಮೇಲೆ ಒಂದಿಷ್ಟು ಪರಿಣಾಮ ಮಾಡಿದೆಯಲ್ಲಾ,
ಅದೇ ದೊಡ್ಡ ಸಮಾಧಾನ."

ಅವರ ಸಾಮೀಷ್ಯದಲ್ಲಿ ವಿಚಿತ್ರವಾದ ಅನುಭವವಾಗುತಿತ್ತು
ನನಗೆ. ವಯಸ್ಸಿನಲ್ಲಿ ನನಗಿಂತ ಕಿರಿಯನಾದ ವ್ಯಕ್ತಿ...ಆದರೆ ಅವರ
ದೆಂತಹ ಜನೋಪಯೋಗಿ ಜೀವನ!....ನನಗೂ ಆಗಿತ್ತು ವಯಸ್ಸು
ಕೋಣನಿಗೆ ಆದ ಹಾಗೆ. ಆದರೆ ಏನು ಪ್ರಯೋಜನ? ಯಾರಿಗೇನು
ಪ್ರಯೋಜನ?

ಏನೇನೋ ವಿಷಯಗಳನ್ನು ಕುರಿತು ಅವರು ಮಾತನಾಡು
ತಿದ್ದರು. ಮೂಕನಾಗಿ ಅವರೆದುರು ನಿಂತಿರಬೇಕೆನಿಸುತ್ತಿತ್ತು.

"ನೋಡಿ ಚಂದ್ರಶೇಖರ್, ನಮ್ಮ ಪೀಳಿಗೆಯೇ ಹಾಗೆ......
ಸಮಾಜದ ವಿಷಮ ಚಕ್ರಕ್ಕೆ ನಮ್ಮ ಬಟ್ಟೆ ಬರೆ ತಗಲಿ ಹರಿದು ಚಿಂದಿ
ಯಾಗಿದೆ. ಮನಸ್ಸು ತೂಗಾಡ್ತದೆ-ಗೊತ್ತು ಗುರಿ ಇಲ್ಲದೆ.