ಪುಟ:Vimoochane.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೩೩೩

ನಾನು ಆ ಪ್ರಶ್ನೆಯನ್ನು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಮಾತಿಲ್ಲದೆ
ಸ್ಮಶಾನ ಸಮಾನವಾದ ನಿಮಿಷಗಳು ಉರುಳಿದುವು.

"ಯಾವಾಗ ಏನಾಯ್ತು ಕಂಠಿ?"

ಶ್ರೀಕಂಠ ನನ್ನ ಭುಜಕ್ಕೊರಗಿದ. ಅವನ ಕಣ್ಣುಗಳಲ್ಲಿ ನೀರು
ತೊಟ್ಟಿಕ್ಕುತಿತ್ತು... ಆಮೇಲೆ ನಿಧಾನವಾಗಿ ತಡೆದು ತಡೆದು ಒಂದೊಂದೆ
ಮಾತು ಹೊರಬಂತು.

ಶ್ರೀಕಂಠನ ಕೈಯಲ್ಲಿ ಶಾರದೆಯ ಸಾವು.

ಒಟ್ಟಿನಲ್ಲಿ ಆಗಿದ್ದುದಿಷ್ಟು:

ರಾತ್ರಿ ಶ್ರೀಕಂಠ ಮನೆಗೆ ಬಂದಾಗ ಹತ್ತು ಹೊಡೆದಿತ್ತು.
ಶಾರದೆಯ ಕೊಠಡಿಯಲ್ಲಿ ಬೆಳಕಿರಲ್ಲಿಲ್ಲ. ಮಗು ನಾಗರಾಜ ತಂದೆ
ತಾಯಿಯರ ಹಾದಿ ನೋಡದೆ ನಿದ್ದೆ ಹೋಗಿದ್ದ. ಆಡುಗೆಯ ಆಚಾರ್ಯ
ಬಂದಾಗ ಸಿಡುಕಿನಿಂದ ಮಾತನಾಡಿ ಶ್ರೀಕಂಠ ಅವನನ್ನು ಕೆಳಕ್ಕಟ್ಟಿದ.

ಹನ್ನೊಂದರ ಹೊತ್ತಿಗೆ ಶಾರದಾ ಬಂದಳು. ಅದು ಯಾರದೋ
ಕಾರು.ಆ ಸದ್ದು ಅವಳ ತಂದೆಯ ಕಾರಿನದಾಗಿರಲಿಲ್ಲ...ಆಕೆ
ಮಹಡಿಯ ಮೇಲೇರಿ ಬಂದಾಗಲೂ ಹಸನ್ಮುಖಿಯಾಗಿ ಯಾವುದೋ
ಹಾಡನ್ನು ಗುಣ ಗುಣಿಸುತ್ತಲೇ ಇದ್ದಳು. ತೆರೆದಿದ್ದ ಬಾಗಿಲಿನೆದುರು
ಆಕೆ ಹಾದು ಹೊದಾಗ,ಶ್ರೀಕಂಠ ಅವಳನ್ನು ನೋಡಿದ. ಆ ಸೀರೆ-
ಕುಪ್ಪಸ...ಆ ಶೃಂಗಾರ...ಅಸ್ತವ್ಯಸ್ತವಾಗಿದ್ದ ಕೂದಲು.....ಹಸಿವು
ಇಂಗಿ ತೃಪ್ತಿ ತೋರುತಿದ್ದ ಕಣ್ಣುಗಳು...ಮತ್ತೂ ಬೆಚ್ಚಗೆ ಇದ್ದಂತಿದ್ದ
ತುಟಗಳು...

ಶ್ರೀಕಂಠ ಆವಳನ್ನು ಕೂಗಿ ಕರೆದ:

"ಶಾರದಾ!"

ಉತ್ತರ ಬರಲಿಲ್ಲ.

ಮತ್ತೊಮ್ಮೆ ಶ್ರೀಕಂಠ ಏರಿದ ಧ್ವನಿಯಲ್ಲಿ ಕರೆದ:

"ಶಾರದಾ! ಬಂದು ಹೋಗು!"

ಅವಳು ಬರಲಿಲ್ಲ. ತನ್ನ ಕೊಠಡಿಗೆ ಹೋಗಿ ದೀಪ ಹಾಕಿದಳು.