ಪುಟ:Vimoochane.pdf/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೬

ವಿಮೋಚನೆ

"ಇರ್ಬೇಕು, ಇವೆ."

"ಅವಳ್ನ ಹಾಸಿಗೆ ಮೇಲೆ ಮಲಗಿಸ್ಬಿಟ್ಟು ಆ ಟೇಬ್ಲೆಟ್ಸ್

ಸೀಸೇನೂ ಒಂದೆರಡು ಟೇಬ್ಲೆಟ್ ಗಳನ್ನೂ ಹತ್ತಿರವೇ ಚೆಲ್ಲಿದರಾಯ್ತು."

"ಅಷ್ಟು ಸಾಕೆ?"

"ಧಾರಾಳವಾಗಿ, ಆದರೆ ನೀನು ಶಾಂತವಾಗಿರ್ಬೆಕು. ಎನೂ ತಿಳೀದವರ ಹಾಗೆ ಇದ್ಬಿಡ್ಬೇಕು....ಅಷ್ಟು ಮಾಡಿ ಬರೋಣ...",

ಜೀವಚ್ಛವದಂತೆ ಆತ ನನ್ನನ್ನು ಹಿಂಬಾಲಿಸಿದ. ಹಾದಿಯಲ್ಲಿ ಆತ ಪಿಸುಮಾತನಾಡುತ್ತಿದ್ದ:

"ದೀಪ ಉರೀತಾನೇ ಇದೆಯೋ ಏನೋ...ದೀಪ.."

ಉರಿಯುತಿದ್ದ ದೀಪ...ರಾತ್ರೆ ಎರಡು ಘಂಟೆಯ ಆ ಹೊತ್ತಿನಲ್ಲಿ ನಾಲ್ಕಾರು ಜನ ಮಹಡಿಯ ಮೇಲಿದ್ದುದು ನಮಗೆ ಕಾಣಿಸಿತು... ಶ್ರೀಕಂಠನ ಮಾವ, ಪೋಲೀಸ್ ಅಧಿಕಾರಿ, ಪೋಲೀಸರು, ಮನೆಯ ಆಳುಗಳು....

"ಚಂದ್ರು, ಓಡಿ ಹೋಗೋಣ."

"ಹುಚ್ಚನ ಹಾಗೆ ಆಡ್ಬೇಡ."

"ಏನೂ ತಿಳೀದವರ ಹಾಗೆ, ಸಿನಿಮಾದಿಂದ ಬರ್ತಿರೋರ ಹಾಗೆ, ಒಳಕ್ಕೆ ಹೋಗೋಣ."

ನಡಗುತ್ತಿದ್ದ ಬೆರಳುಗಳಿಂದ ಶ್ರೀಕಂಠ ಕ್ರಾಪು ಸರಿಪಡಿಸಿ ಕೊಂಡ....ನಾವು ಮೆಟ್ಟಲೇರಿದೆವು.

ಶ್ರೀಕಂಠನನ್ನು ನೋಡುತ್ತಲೆ, ಅವನ ಮಾವ ಧ್ವನಿ ತೆಗೆದು ಆಳತೊಡಗಿದರು: ಪೋಲೀಸ್ ಅಧಿಕಾರಿ,ಶ್ರೀಕಂಠನ ಬದಲು ನನ್ನನ್ನೇ ನೋಡುತ್ತಾ, "ಆಭರಣಗಳ್ನ ಕದಿಯೋಕೇ ಈ ಕೊಲೆ ಆಗಿರೋದು....ಮನೆಯ ಆಳುಗಳನ್ನೆಲ್ಲ ಅರೆಸ್ಟ್ ಮಾಡ್ಬೇಕು," ಎಂದ.

...ಆಗ ನಾನು ಎಚ್ಚರವಾಗಿದ್ದೆನೆ? ಅಥವಾ ಜೀವನದಲ್ಲಿ ಧುಮುಧುಮಿಸಿ ಒಮ್ಮೆಲೆ ಬಂದ ಕಾರ್ಗತ್ತಲೆ ನನ್ನನ್ನು ಕುರುಡನಾಗಿ ಮಾಡಿತೆ" ನಾನು ಯಾಕೆ ಹಾಗೆ ಮಾಡಿದೆ?

ನನ್ನ ಸ್ವರ ಹೇಳುತಿತ್ತು.