ಪುಟ:Vimoochane.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೨೯

ತಿಳಿದಿರಬೇಕು. ಯಾಕೆಂದರೆ ಅವನ ಸ್ವರದಲ್ಲಿ ನಡುಕವಿತ್ತು. ನಾನು
"ಅಮ್ಮಾ ಅಮ್ಮಾ" ಎಂದೆ. ತಂದೆ ನನ್ನ ಬಲಗಾಲಿಗೆ ತನ್ನ ಮುಖ
ವನ್ನೊತ್ತಿ ಬಿಗಿಹಿಡಿದ. ನನ್ನ ಕಾಲು ತೇವದಿಂದ ಒದ್ದೆಯಾಯಿತು.
ಆ ಅನುಭವ ನನಗೆ ಹೊಸತಲ್ಲ.ಅವನು ಅಳುತ್ತಿದ್ದ.

ಆ ರಾತ್ರೆ ನಾವು ಯಾವುದೋ ಪೇಟೆಯಲ್ಲಿ ದೊಡ್ಡದೊಂದು
ಕಟ್ಟಡದ ಮಗ್ಗುಲಲ್ಲಿ ಮಲಗಿಕೊಂಡೆವು. ಇಲ್ಲಿ ಮಳೆಯಿರಲಿಲ್ಲ.
ಆದರೆ ಶೀತಗಾಳಿ ಮೈ ಕೊರೆಯುತ್ತಿತ್ತು. ನಾನು ಮುದುಡಿಕೊಂಡು
ತಂದೆಯ ಎದೆಯನ್ನಪ್ಪಿ ಮಲಗಿದ್ದೆ. ಆತ ಬಲತೋಳನ್ನು ನನ್ನ
ಸುತ್ತೂ ಬಳಸಿ ನನ್ನನ್ನು ಬೆಚ್ಚಗಿಡಲು ಯತ್ನಿಸುತ್ತಿದ್ದ. ಬಹಳ
ಹೊತ್ತು ನಮಗೆ ನಿದ್ದೆ ಬರಲೇ ಇಲ್ಲ. ರಾತ್ರಿಯೆಲ್ಲಾ ಬೀದಿಯಲ್ಲಿ
ಸಾವಿರ ಸದ್ದುಗಳಾಗುತ್ತಿದ್ದವು. ಯಾರೊ ಜಗಳಾಡುತ್ತಿದ್ದರು.
ಯಾರೋ ಆಳುತ್ತಿದ್ದರು. ಯಾರೋ ನಗುತ್ತಿದ್ದರು. ಇದರಿಂದ
ತಮ್ಮ ನೆಮ್ಮದಿಗೆ ಭಂಗ ಬಂತೇನೋ ಎಂಬಂತೆ ಬಡಕಲು ಬೀದಿ
ನಾಯಿಗಳು ಬೊಗಳುತ್ತಿದ್ದವು. ಸಾಲದುದಕ್ಕೆ ಹಸಿದ ಹೊಟ್ಟೆಬೇರೆ.
ನಿದ್ದೆ ಬಂದರೆ ಹಸಿವನ್ನು ಮರೆಯಬಹುದು. ಆದು ಗೊತ್ತಿದ್ದೊ
ಏನೋ ನಿದ್ದೆ ಸಮಿಪಕ್ಕೆ ಸುಳಿಯದಂತೆ, ಹಸಿವು ಹೋರಾಡುತ್ತಿತ್ತು.

ಬೆಳಗು ಮುಂಜಾನೆ ನಾವು ಎದ್ದೆವು. ಯಾರೋ ಬೀದಿಯ
ಬಳಿ ಬಾವಿ ಕಟ್ಟೆಯ ಸುತ್ತಲೂ ನಿಂತು ಮುಖ ತೊಳೆಯುತ್ತಿದ್ದರು,
ಸ್ನಾನ ಮಾಡುತ್ತಿದ್ದರು, ಬಟ್ಟೆ ಒಗೆಯುತ್ತಿದ್ದರು. ನಾವು ಆತ್ತ
ಹೋಗಿ ನೀರು ಕೇಳಿ ಪಡೆದು ಬರೀ ಬೆರಳಿಂದ ಹಲ್ಲುಜ್ಜಿದೆವು.
ಆಲ್ಲಿಂದ ಮುಂದೆ, ತಂದೆಗೆ ಪರಿಚಿತರಾಗಿದ್ದ ಯಾರನ್ನೋ ಹುಡುಕಿ
ಪ್ರಯಾಣ. ಹಳ್ಳಿಯಲ್ಲಿದ್ದಾಗ ನನ್ನ ತಂದೆ
ಗೆ ಅಕ್ಷರಾಭ್ಯಾಸ ಹೇಳಿ ಕೊಡುವ ಕೆಲಸವೂ ಇತ್ತು-ಎಂದಿದ್ದೆ. ವಿದ್ಯಾವಂತನಾದ ತಂದೆ
ಕಂಠ ಪಾಟಮಾಡಿದ್ದ ವಿಳಾಸವನ್ನು ಹುಡುಕುತ್ತ ನನ್ನನ್ನು ಬೆನ್ನಿಗೆ
ಅಂಟಿಸಿಕೊಂಡು ಊರು ಅಲೆದ.

ಆ ಸಂಜೆ ಆ ಮನೆ ದೊರೆಯಿತು. ಹೊಲಸು ನಾರುತಿದ್ದ ಗಲ್ಲಿ
ಯಲ್ಲಿ, ಗಾಳಿ ಬೆಳಕು ಆಡದಿದ್ದ ಮನೆಯಲ್ಲಿ,ಅವರು ವಾಸವಾಗಿದ್ದರು.