ಪುಟ:Vimoochane.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವನು ಹಲವು ಪ್ರಶ್ನೆಗಳನ್ನು ಕೇಳಿದ. ನನ್ನ ತಂದೆ ತನಗಿಂತ ಹೆಚ್ಚು ಓದು ಬಲ್ಲವನೆಂಬುದೂ ಆತನಿಗೆ ತಿಳಿಯಿತು. ಆದರೆ, ಅವನೇನು ಮಾಡಬಲ್ಲ? ಆತನೆ ಸ್ವತಃ ನಗರಕ್ಕೆ ಬಂದು ಒಂದು ವರ್ಷ ವಾಗಿತ್ತು ಆಷ್ಟೆ.

"ನೀವು ಒಪ್ಪೋ ಹಂಗಿದ್ದರೆ ನನ್ನ ಜೊತೇಲಿ ಬನ್ನಿ. ಹೊಸ ರೋಡು ಮಾಡಿಸ್ತಾಯವರೆ. ಜಲ್ಲಿಕಲ್ಲು, ಮಣ್ಣು ಹೊತ್ತಾಕೊ ಕೆಲಸ. ದಿನಕ್ಕೆ ನಾಲ್ಕಾಣೆ ಕೂಲಿ. ಏನೇಳಿ ಬತ್ತೀರಾ?"

ತಂದೆ ನನ್ನ ಮುಖ ನೋಡಿದ. ಅಮ್ಮ ಇರುತ್ತಿದ್ದರೆ, " ಏನ್ಮಾಡೋಣಾಂತಿಯಾ ರುಕ್ಕೂ?" ಎಂದ ಕೇಳುತ್ತಿದ್ದನೇನೊ. ಆದರೆ, ಅಮ್ಮ ಇರಲಿಲ್ಲ. ನಾನು ಸುಮ್ಮನಿದ್ದೆ. ನನ್ನ ಮುಖ ನೋಡುತ್ತಾ ತಂದೆ ಹೇಳಿದ: "ಆಗ್ಲೇಳಿ. ಇವತ್ನಿಂದಾನೆ ಬತ್ತೀನಿ ನಡೀರಿ.

"ಇವತ್ತು ಭಾನುವಾರ. ರಜ ಐತೆ. ನಾಳೆಯಿಂದ ಹೋಗಾನ.

" ಆತ ನಮ್ಮ ಮತ ಕೇಳಿದ. ಮತ್ತೆ ಅಳುಕದೆ ನಮ್ಮನ್ನು ಮುದುಕಿಯಯೊಬ್ಬಳು ವಾಸವಾಗಿದ್ದ ಮನೆಗೆ ಕರೆದೊಯ್ದ.

ಆ ಮುದುಕಿ ಅದೇ ಪ್ರಶ್ನೆ ಕೇಳಿದರು:

"ಯಾವ ಜನ ನೀವು ?"

ತಂದೆ ಉತ್ತರ ಕೊಟ್ಟ. ಆ ಸ್ವರದಲ್ಲಿ ಅಭಿಮಾನವೂ ಇರಲಿಲ್ಲ, ವಿಷಾದವೂ ಇರಲಿಲ್ಲ.

ಮುದುಕಿ ನಾಲ್ಕು ನಿಮಿಷ ಯೋಚಿಸಿದಂತೆ ತೋರಿತು. ಆಕೆ ತೀರ್ಮಾನಕ್ಕೆ ಬರಲು ಸಹಾಯವಾಗುವಂತೆ, ನಮ್ಮನ್ನು ಅಲ್ಲಿಗೆ ಕರೆದುತಂದಾತ ಹೇಳಿದ:

"ಒಳ್ಳೇಯವರು ಕಣಜ್ಜಿ. ಹಳ್ಳಿಯೊಳಗೆ ಆಸ್ತಿಪಾಸ್ತಿ ಮಸ್ತಾಗಿತ್ತು. ಪರಮಾತ್ಮ ಹೆಂಗ್ಬರ್ದಿದ್ನೋ. ಎಲ್ಲಾ ಕಳ್ಕೊಂಡ್ ಬಿಟ್ರು."

ಎಲ್ಲವನ್ನೂ--ತಾಯಿಯನ್ನೂ ಕೂಡ--ಕಳೆದುಕೊಂಡ ಕತೆಯನ್ನು ತಂದೆ ಚುಟುಕಾಗಿ ಹೇಳಿದ. ಹೇಳುವಾಗ, ತನ್ನ ಹೆಂಡತಿ ರುಕ್ಕೂ ಎಂದೇ ಹೇಳುತ್ತಿದ್ದ. ನನಗೆ ದುಃಖವಾಗುತ್ತಿತ್ತು. ತೇಲಿಹೋದ ಜೀವ ನನ್ನ ತಾಯಿ ಎಂದುಕೂಡಾ ಹೇಳಬಾರದೆ?