ಪುಟ:Vimoochane.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೩೩

ನನ್ನ ಯೋಚನೆಗಳನ್ನು ತಿಳಿದುಕೊಂಡವನ ಹಾಗೊ ಏನೋ
ತಂದೆ ಸ್ವರ ಕೂಡಿಸಿದ:

"ಇವನೊಬ್ಬನೇ ಚಂದ್ರು ಈಗ ಉಳಿದಿರೋದು. ರುಕ್ಕು
ಹೆತ್ತಿದ್ದು ಇವನೊಬ್ಬನನ್ನೇ.ಇವನ್ಗಾಗಿಯೇ ನಾನು ಬದುಕಿದೀನಿ."

ಆ ಮಾತಿನ ಅರ್ಥ ನನಗೆ ಚೆನ್ನಾಗಿ ಆಗಲಿಲ್ಲ; ಆಗ ಚೆನ್ನಾಗಿ
ಆಗಲಿಲ್ಲ. ಒಬ್ಬನಿಗಾಗಿ ಇನ್ನೊಬ್ಬರು ಬದುಕುವುದೆಂದರೇನು?

...ಆ ಮುದುಕಿ ಒಳ್ಳೆಯವರ ಹಾಗೆ ಕಂಡರು. ಬೇರೆ ಜಾತಿ
ಯವರೆಂದು ನಮ್ಮನ್ನು ಕೀಳಾಗಿ ಕಾಣಲಿಲ್ಲ. ಆಕೆಯ ಬೋಡುತಲೆ
ಮುಂಜಾವದ ಸೂರ್ಯನ ಹೊಂಬೆಳಕಿಗೆ ಚಕಚಕಿಸಿತು. ಊರಿನ
ಹೊರಗೂ ಅಲ್ಲ ಒಳಗೂ ಅಲ್ಲ ಎನ್ನುವ ಹಾಗಿದ್ದ ಒಂದು ಜಾಗದಲ್ಲಿ
ಅವರ ಮನೆಯಿತ್ತು. ಆಕೆಯ ಯಜಮಾನರಿದ್ದಾಗ ಸ್ವಂತದ್ದಾಗಿ
ಉದಿಸಿಬಂದ ಬಡಕಲು ಮನೆ.ಆಕೆಗೆ ಮಕ್ಕಳಿರಲಿಲ್ಲ. ಆ ಬಳಿಕ,
ಜೀವನದ ಮಧ್ಯಾಹ್ನ ಬರುವುದಕ್ಕೆ ಮುಂಚೆಯೇ, ಪ್ರಾಪ್ತವಾದ
ವೈಧವ್ಯ. ಆ ಮನೆಯ ಮುಂಭಾಗದಲ್ಲಿ ಎರಡು ಎಮ್ಮೆಗಳನ್ನು ಕಟ್ಟ
ದ್ದರು. ಒಂದು ಎಮ್ಮೆಯ ಕರುವಿತ್ತು. ನನ್ನನ್ನೇ ನೋಡುತ್ತ ಆ
ಮುದುಕಿ ಮಾತನಾಡಿದರು.

"ಈ ಎಮ್ಮೆಗಳ ಸೆಗಣಿ ಎತ್ತೋದು ನಿನ್ಕೆಲಸ. ಏನಪ್ಪ ಮರಿ?
ಹೊರಕ್ಕೆ ಹೋಗಿ ಒಂದಿಷ್ಟು ಮೇವೂನೂ ತಂದ್ಹಾಕ್ಬೇಕು. ಏನು
ಅಷ್ಟು ಮಾಡ್ತೀಯಾ?"

ನಾನೇನು ಉತ್ತರಕೊಟ್ಟೆನೋ ನೆನಪಿಲ್ಲ. ಆದರೆ ನಮ್ಮ
ಹಳ್ಳಿಯ ಮನೆಯಲ್ಲಿದ್ದ ಗೋಪಿ ಹಸುವಿನ ನೆನಪಾಯಿತು ನನಗೆ.
ಅದರ ಪುಟ್ಟ ಕಂದ ಕಿವಿ ನಿಗುರಿಸಿ ಕುಣಿದಾಗ ನನಗೆ ಲೋಕವೆಲ್ಲಾ
ಸುಂದರವಾಗಿ ತೋರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಯಾರೋ
ಬಂದು ಅವುಗಳೆರಡನ್ನೊ ಹೊಡೆದುಕೊಂಡುಹೋದರು. ನಾನು
ಗೋಳೋ ಎಂದು ಅತ್ತೆ. ಆ ಜನ ನಮ್ಮ ತಂದೆಗೆ ಸಾಲಕೊಟ್ಟಿದ್ದರು.
ಆ ಹಣದ ಎರಡರಷ್ಟು ಬಡ್ಡಿಯನ್ನು ತಂದೆ ತೆತ್ತಿದ್ದರೂ ಮೂಲ ಸಾಲ
ಸಂದಾಯವಾಗದೇ ಉಳಿದಿತ್ತು. ಮನೆಗೆ ಬಂದು ಒರಟುಮಾತುಗಳ.

8