ಪುಟ:Vimoochane.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನ ರೋದನ, ತಂದೆಯನ್ನು ಸಂಕತಟಕ್ಕೆ ಗುರಿಮಾಡಿರಬೇಕು. ಆತ ದೀರ್ಘ ಕಾಲ ಯೋಚನೆಯಲ್ಲೇ ಮುಳುಗಿ ಕುಳಿತ. ಅವನ ಮಡಿಲಲ್ಲಿ ನಾನು ಮುಖವನ್ನು ಮುಚ್ಚಿಟ್ಟೆ.

"ಸ್ಕೂಲಿಗೆ ಹೋಗಲ್ಲ ಆನ್ಬಾರದು ಮಗೂ. ಯಾರಾದರೂ ಹಿಂಗೆ ಆನ್‌ಬವ್ದಾ? ಸ್ಕೂಲಿಗೆ ಹೋಗ್ದಿದ್ರೆ ವಿದ್ಯೆ ಹೆಂಗ್ಬಂದೀತು? ನೀನು ದೊಡ್ಡಮನುಷ್ಯ ಹೆಂಗಾದೀಯ?"

"ಇಲ್ಲಪ್ಪ, ನಾನು ದೊಡ್ಡಮನುಷ್ಯ ಆಗೋದಿಲ್ಲ."

"ಅಯ್ಯೋ ಹುಚ್ಚುಪ್ಪ, ಹಂಗಂತಾರೇನೋ ಯಾರಾದರೂ?"

ನಾನು ಆಳು ನಿಲ್ಲಿಸಿದೆ. ಆದರೆ ಅಪ್ಪನ ಬಾಡಿದ ಮುಖ ಅರಳಲೇ ಇಲ್ಲ. ನನಗೆ ಅದು ಅಸಹನೀಯವಾಯಿತು. ನನ್ನ ಅಪ್ಪನಿಗೆ ತೃಪ್ತಿಯನ್ನುಂಟುಮಾಡುವ ಏನಾದರೊಂದು ಕೆಲಸ ಮಾಡಬೇಕೆನ್ನಿಸಿತು. ಏನು ಮಾಡಿದರೆ ಆತನಿಗೆ ತೃಪ್ತಿಯುಂಟಾದೀತು?

ಒಮ್ಮೆಲೆ ಉತ್ತರ ಹೊಳೆದು ನನಗೆ ಸಂತೋಷವಾಯಿತು.

"ಅಪ್ಪಾ ಅಪ್ಪಾ, ನಾನು ಸ್ಕೂಲಿಗೆ ಹೋಗ್ತೀನಿ, ದೊಡ್ಡಮನುಷ್ಯ ಆಗ್ತೀನಿ" ಎಂದೆ.

ತಂದೆ ನನ್ನನ್ನು ತಬ್ಬಿಕೊಂಡ. ಬೆಚ್ಚನೆಯ ಎರಡು ಹನಿ ಕಣ್ಣೀರು ನನ್ನ ಬೆನ್ನಮೇಲೆ ಉರುಳಿ ಹರಿಯಿತು.

ಹಾಗೆ ನಾನು, ದೊಡ್ಡಮನುಷ್ಯ ನಾಗಲೆಂದು, ಶಾಲೆಗೆ ಹೋದೆ. ದಿನಗಳು ಉರುಳಿದುವೂ ಒಂದು ರೀತಿಯ ಯಾಂತ್ರಿಕ ಜೀವನ. ಬಿಸಿಲು, ಮಳೆ, ಚಳಿ. ಬೆಳಗು ಮುಂಜಾನೆ, ಸಂಚೆ, ರಾತ್ರೆ. ಎಂದಾದರೊಮ್ಮೆ ಕಾಹಿಲೆ ಕಸಾಲೆ. ಹೀಗೆಯೆ ಕ‍ಳೆಯಿತುದಿನ.

.... ಆ ದಿನ ನನ್ನ ಎಳೆಯ ಜೀವನದಲ್ಲೆ ಮಹತ್ತರವಾದೊಂದು ಘಟನೆ ನಡೆಯಿತು. ಆ ಹುಡುಗನಿಗೆ ಯಾವ ಮದವೊ ಯಾರಿಗೆ ಗೊತ್ತು? ನಾಲ್ಕು ದಿನಗಳಿಂದ ಅವನು ನನ್ನನ್ನು ಪೀಡಿಸುತ್ತಿದ್ದ. ಕಾರಣವಿಷ್ಟೆ: ತರಗತಿಯಲ್ಲಿ ನಾನು ಮೊದಲಿಗನಾಗಿದ್ದೆ. ಶುಭ್ರವಾದ ಅಂಗಿ ಚಡ್ದಿಯಿಲ್ಲದ, ಕ್ರಾಪಿನ ಬದಲು ಜುಟ್ಟುಬಿಟ್ಟದ್ದ, ಒಬ್ಬ ಬಡ