ಪುಟ:Vimoochane.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒರಟಾಗಿದ್ದ ಮಾಂಸಖಂಡಗಳು, ಬರಿಗಾಲು. ಮುಖದ ತುಂಬಾ ಕುರುಚಲು ಗಡ್ಡ ಇದ್ದಿರಬೇಕು. ನನಗೆ ನೆನಪಿಲ್ಲ. ನುಣುಪಿನ ಮುಖ ಮತ್ತು ಗಡ್ಡಗಳ ನಡುವಿನ ವ್ಯತ್ಯಾಸ ಆಗ ನನಗೆ ತಿಳಿದಿರಲಿಲ್ಲ.

ಇನ್ನು ನಾನು, ಸಂಜೆ ಶಾಲೆಬಿಡುವ ಹೊತ್ತಾದರೂ ಸ್ಲೇಟು ಪುಸ್ತಕಗಳನ್ನು ಹಿಡಿದುಕೊಂಡೇ ಬಂದಿದ್ದೆ. ಆರಂಭದ ದಿನದಿಂದಲೂ ನನ್ನ ಸಂಗಾತಿಯಾಗಿದ್ದ ಆ ಪೋಷಾಕು. ಹರಕು ಚಡ್ಡಿ ಮತ್ತು ಹರಿದ ಅಂಗಿ. ಪ್ರತಿ ಭಾನುವಾರ ನಮ್ಮಪ್ಪ ಅದಕ್ಕೆ ನೀನು ಕಾಣಿಸುತ್ತಿದ್ದ. ನಮ್ಮಜ್ಜಿ ಯಾವುದೋ ಸಾಬೂನಿನ ತುಣುಕು ಕೊಡುತ್ತಿದ್ದರು. ನನ್ನ ತಲೆಯ ಮೇಲೆ, ನನ್ನನ್ನು ಹಲವಾರು ಸಾರಿ ಅವಮಾನಕ್ಕೆ ಗುರಿಮಾಡಿದ್ದ ಜುಟ್ಟು ಕುಳಿತ್ತಿತ್ತು.........

ನನ್ನ ಜುಟ್ಟು ಮತ್ತು ನಮ್ಮ ತಂದೆಯ ಜುಟ್ಟು. ಅಜ್ಜಿಗಾದರೋ ಆ ತೊಂದರೆಯೆ ಇರಲಿಲ್ಲ. ಆಕೆಯೇ ಭಾಗ್ಯವಂತೆ.

"ಹೊ ಏನಂತಿಯಾ ?"

ನನ್ನ ತಂದೆ ಮೌನವಾಗಿದ್ದ.

"ಇವತ್ನೋಡು, ಆ ಹುಡುಗ ಸ್ಕೂಲ್ಗೇ ಬಂದಿಲ್ಲ. ಅವನ್ಮನೇಯವರು ಬೇರೆ ಚೀಟಿ ಕಳಿಸಿದಾರೆ. ಅಲ್ಗೋಗಿ ಅವರ ತಂದೇನ ನೋಡ್ಕೊಂಡು ಬರಬೇಕು......"

"ನಮ್ಮ ಹುಡುಗ ದೊಡ್ಡ ತಪ್ಪು ಮಾಡ್ದ ಸ್ವಾಮಿ."

ನಾನು ಅಲ್ಲವೆನಲಿಲ್ಲ. ಉಪಾಧ್ಯಾಯರು ಹಿಂತಿರುಗಿ ನೋಡಿ ನನ್ನನ್ನು ಕೇಳಿದರು:

"ಯಾಕೋ ಆವನಿಗೆ ಹೊಡೆಯೋಕೆ ಹೋದೆ?"

ನಿಜ ಹೇಳಿಬಿಡೋಣವೆನ್ನಿಸಿತ್ತು. ಯಾಕೆ ಹೇಳಬಾರದು?

"ಅವನು ನಂಗೆ--"

ಮಾತನಾಡತೊಡಗಿದ್ದ ನನ್ನನ್ನು ತಂದೆ ಹಿಡಿದು ನಿಲ್ಲಿಸಿದ. ಅವನೆಂದ:

"ಹೋಗಲಿ ಬಿಡಿ ಸ್ವಾಮಿ,ಏನೂ ತಿಳೀದ ಹುಡುಗ. ಇನ್ನೊಂದ್ಸಲ ಹೀಗ್ಮಾಡಲ್ಲ."