ಪುಟ:Vimoochane.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತ್ತಿತ್ತು. ಬೇರೆಯವರ ಪಾಲಾಗಿದ್ದ ಹೆಸುರು ಹೊಲ, ಹಸು, ಗುಡಿಸಲು......ಹೇಮಾವತಿ ನದಿಯಾಚೆಗಿನ ಹಳ್ಳಿ....

ಮತ್ತೆ ಎರಡು ದಿನಗಳಾದ ಮೇಲೆ, ಕಾಹಿಲೆಯಿಂದ ಎದ್ದವ ನಂತೆ ತಂದೆ, ಕೆಲಸ ಹುಡುಕಿಕೊಂಡು ಹೋದ.

ಬಟ್ಟೆ ತಯಾರಿಯ ಹೊಸ ಕಾರ್ಖಾನೆಯಲ್ಲಿ ಅರಳೆ ಹಿಂಜುವ ಕೆಲಸ ಅವನಿಗೆ ದೊರೆಯಿತು. ದಿನಕ್ಕೆ ಒಂಭತ್ತು ಘಂಟೆಗಳ ದುಡಿತ. ಆರಾಣೆ ಕೂಲಿ.

ವರ್ಷ ವರ್ಷವೂ ಉತ್ತೀರ್ಣನಾಗುತ್ತ ನಾನು ಶಾಲೆಯಲ್ಲಿ ಓದುತ್ತಿದ್ದೆ. ವರ್ಷ ವರ್ಷವೂ ಕ್ಷೀಣನಾಗುತ್ತ ತಂದೆ ದುಡಿಯುತ್ತಿದ್ದ. ಅವನ ಹಳ್ಳಿಯ ದೇಹ ನಗರದ ಗಾಣದಲ್ಲಿ ಸಿಲುಕಿ ನಜ್ಜು ಗುಜ್ಜಾಗಿತ್ತು. ಆದರೂ ಮಗನು ದೊಡ್ಡವನಾಗುವ ದೊಡ್ಡ ಮನುಷ್ಯನಾಗುವ ಅವನ ಹಂಬಲ, ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಆದರೆ ಒಂದು ಜೀವ ಇನ್ನೊಂದು ಜೀವಕ್ಕಾಗಿ ಆ ರೀತಿ ತ್ಯಾಗ ಮಾಡುವುದು ಅವಶ್ಯ ವಿತ್ತೆ? ಮಳೆಯಲ್ಲಿ ಮೈ ತೋಯಿಸಿಕೊಂಡು, ಚಳಿಯಲ್ಲಿ ದೇಹ ಕೊರೆಸಿಕೊಂಡು, ಬಿಸಿಲಲ್ಲಿ ಬೆವರಿ ನೀರಾಗಿ, ಮನುಷ್ಯ ಹಾಗೆ ದುಡಿಯಲೇ ಬೇಕೆ?

ನಾನು ಯೋಚಿಸುತ್ತಿದ್ದೆ. ಆದರೆ ತಂದೆ ಯೋಚಿಸುತ್ತಿರಲಿಲ್ಲ. ಆತ ನನ್ನ ಸಹಪಾಠಿಗಳು ಕೆಲವರ ಗುರುತುಮಾಡಿಕೊಂಡು ನನ್ನ ಬಗೆಗೆ ಆತುರದಿಂದ ವಿಚಾರಿಸುತ್ತಿದ್ದ. ನನ್ನನ್ನು ಕುರಿತು ಹೊಗಳಿಕೆಯ ಮಾತು ಕೇಳಿದ ರಾತ್ರೆ ಆತನ ಮುಖ ಅರಳಿರುತ್ತಿತ್ತು.

ನನ್ನನ್ನು ತೆಗಳಿ ಯಾರೂ ಮಾತನಾಡುತ್ತಿರಲಿಲ್ಲ. ನಾನೀಗ ದುಡ್ಡಿನವರೊಡನೆ ಜಗಳ ಕಾಯುತ್ತಿರಲಿಲ್ಲ. ಅವರನ್ನು ದೂರವಿಡುತ್ತಿದ್ದೆ. ನನಗೇನಾದರೂ ಅವಮಾನವಾದರೆ, ಸದ್ಯಕ್ಕೆ ಅದರ ಯೋಚನೆ ಬೇಡವೆಂದು ತಣ್ಣಗಿರುತ್ತಿದ್ದೆ. ಮಾತಿಗೆ ಪ್ರತಿಮಾತು ಹೇಳಿ, ಆ ತಪ್ಪಿಗೆ ದುಃಖವನ್ನು ತಂದೊಡ್ಡಲು ನನ್ನು ಸಿದ್ದನಿರಲಿಲ್ಲ.

ಅದೊಂದು ಮಳೆಗಾಲ. ನನ್ನ ತಂದೆ ಮೈ ಕಾವೇರಿ ಮಲಗಿದ್ದ.