ಪುಟ:Vimoochane.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಸಮಾಧಾನ ಉಂಟುಮಾಡುವುದು ಸಾಧ್ಯ...... ಇಲ್ಲಿ ಈ ನಾಯಿ ಮತ್ತದರ ಯಜಮಾನಿತಿಯೊಡನೆ ನಾನು ಜಗಳವಾಡಿದರೆ ನನ್ನ ಕಾಲಿಗೆ ನಾನೇ ಕಲ್ಲು ಹೇರಿಕೊಂಡ ಹಾಗಾಗುವುದು......

ಹಾಗೆಯೇ ಸ್ವಲ್ಪ ದೂರ ನಡೆದುಹೋದೆ. ಬೀದಿಯಲ್ಲಿ ಯಾರು ಬಂದರು ಹೋದರು ಎಂಬುದರ ಅರಿವೇ ನನಗಿರಲಿಲ್ಲ. ನಾನು ಸುಮ್ಮನೆ ನಡೆದುಹೋದೆ. ತಲೆ ಕೆಳಗೆಹಾಕಿ ಅಸಹಾಯತೆಯ ಕಣ್ಣೀರಿನ ಪ್ರವಾಹವನ್ನು ಹರಿಯಗೊಡುತ್ತಾ ಬೀದಿಯುದ್ದಕ್ಕೂ ನಡೆದೆ. ಕತ್ತಲೆ ಹೊತ್ತು ನನ್ನ ಕಣ್ಣೀರು ಯಾರಿಗೂ ಕಾಣಿಸುತ್ತಿರಲಿಲ್ಲ ಎಂಬುದೇ ನನ್ನ ಪಾಲಿಗೊಂದು ಸಮಾಧಾನವಾಗಿತ್ತು. ನನ್ನಲ್ಲಿ ಬೆಳೆದುಬಂದ ಅಭ್ಯಾಸ ಅದು. ಭಾವನೆಗಳು ತುಂಬಿಕೊಂಡಾಗ ನಾನು ಅವುಗಳನ್ನು ಮುಚ್ಚಿಡುತ್ತಿರಲಿಲ್ಲ. ಬಹಿರಂಗವಾಗಿ ಆ ಭಾವನೆಗಳನ್ನು ಜಾಹೀರುಮಾಡುತಿದ್ದೆ......ಆದರೆ ಅದು ಹಿಂದೆ--ನಾನು ಎಳೆಯವನಾಗಿದ್ದಾಗ.

ಎಂಟು ಹೊಡೆದ ಹೊತ್ತಿಗೇ ನಾನು ಆ ಮನೆಯನ್ನು ಮತ್ತೊ ಮ್ಮೆ ಸಮೀಪಿಸಿದೆ. ಬೆಳಕು ಉಗುಳುವ ಕಣ್ಣುಗಳ ಆ ಕಾರಿನಲ್ಲಿ ದೊಡ್ಡಮನುಷ್ಯರ ಬಂದಿರಬಹುದು.... ಅಂಗಣದ ಹೊರಗಿನಿಂದ ಮೂರು ನಾಲ್ಕು ಸ್ವರಗಳು "ಕವಳಾ ತಾಯೀ","ಕವಳಾ ಅಮ್ಮಾ" ಎನ್ತುತ್ತಿದ್ದವು. ಲೋಕಪರಾಯಣರ ಜವಾನನೊ ಏನೊ--ಧಾಂಡಿಗ ವ್ಯಕ್ತಿಯೊಬ್ಬ ಅವರನ್ನು ಓಡಿಸುತ್ತಿದ್ದ. ಅವರ ನಾಯಿ ಗದರಿಕೆಯ ನಟನೆ ಮಾಡುತ್ತಿತ್ತು. ಆ ಬಡ ಭಿಕ್ಷುಕರನ್ನು, ಬಗುಳಿ ಓಡಿಸುವುದು ತನ್ನ ಅಂತಸ್ತಿಗೆ ಸರಿಹೋಗದ ಕೆಲಸ ಎಂದು ಅದು ಭಾವಿಸಿತ್ತೇನೋ.

ನಾನು ಗೇಟನ್ನು ಸಮೀಪಿಸಿದಾಗ ಅಲ್ಲೇ ಇದ್ದ ಜವಾನ, "ಏನಪ್ಪ? ನಿಂದೇನು ಇನ್ನು?" ಎಂದ.

ಸುಮ್ಮನೆ ಭೇಟಗೆ ಬಂದವನೆಂದು ಹೇಳಿದರೆ, ಬಂದ ಹಾದಿಗೆ ಸುಂಕವಿಲ್ಲವೆಂಬಂತೆ ವಾಪಸ್ಸು ಹೋಗಬೇಕಾದೀತು ಎಂದು ಭಾವಿಸಿ, ನಾನು ಮಾತಿನ ಸರಣಿಯನ್ನು ತೀರ್ಮಾನಿಸಿಕೊಂಡೆ.