ಪುಟ:Vimoochane.pdf/೭೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಒಂದು ದಿನ ಅವನೊಡನೆ ನನ್ನ ದಾರುಣ ಕಥೆಯನ್ನು ಹೇಳಿ ಕೊಂಡೆ.

"ಸ್ಕೂಲು ಬಿಟ್ಬುಟ್ನಪ್ಪಾ "ಎಂದೆ.

ವಾಸ್ತವವಾಗಿ ಓದು ಬಿಟ್ಟುಬಿಡುವ ತೀಮಾರ್ನಕ್ಕೆ ನಾನು ಬಂ ದಿರಲಿಲ್ಲ. ಇಂದಲ್ಲ ನಾಳೆ ಮತ್ತೆ ಶಾಲೆಗೆ ಹೋಗುವುದು ಸಾಧ್ಯವಾ ಗುವುದೆಂದೇ ಭಾವಿಸಿದ್ದೆ. ಆದರೂ ಮಾತು ಹಾಗೆ ಬಂದಿತು......ಆ ಮಾತು ಮಾತ್ರ ಸುಳ್ಳಾಗಲಿಲ್ಲ.

ಆ ಸಹಪಾಠಿ ತುಂಬ ಯೋಚಿಸಿದ. ನಾನೂ ಪತ್ರಿಕೆ ಮಾರಲು ಬಂದರೆ ಅವನ ಸಂಪಾದನೆಗೆ ತಡೆ ಒದಗುವುದು . ಮಾರಾಟದ ಕ್ಷೇತ್ರದಲ್ಲಿ ಇನ್ನೊಬ್ಬ ಸ್ಪರ್ಧಿ ಬಂದು ಅವನಪಾಲಿನ ತುತ್ತಿನಲ್ಲಿ ಒಂದಂಶ ಕಡಿಮೆಯಾಗುವುದು. ಅವನು ದೀರ್ಘ ಕಾಲ ಯೋಚಿಸಿದ.

ಎರಡು ಮೂರು ದಿನಗಳಾದ ಮೇಲೆ ಅವನು ನನ್ನನ್ನು ಎರಡು ಪತ್ರಿಕೆಗಳ ಏಜೆಂಟರಲ್ಲಿಗೆ ಕರೆದೊಯ್ದ. ನಾನು ಆ ದಿನದಿಂದ ಪತ್ರಿಕೆ ಮಾರುವ ಹುಡುಗನಾದೆ. ನನ್ನ ಸಹಪಾಠಿಯ ಹೆಸರು ಶೇಷಗಿರಿ. ಶೇಷನಿದ್ದ ಜಾಗದಲ್ಲಿ ನಾನು ಪತ್ರಿಕೆ ಮಾರಬಾರದು ಎಂಬುದು ನಮ್ಮೊಳಗಿನ ಒಪ್ಪಂದವಾಗಿತ್ತು. ಹಾಗೆ ಕೊಟ್ಟ ಮಾತಿಗೆ ನಾನೆಂದೂ ಮಿರಿ ನಡೆಯಲಿಲ್ಲ.

ಮನೆಗೆ ಧಾವಿಸಿ ಬಂದು ತಂದೆಗೆ ಈ ವಿಷಯ ತಿಳಿಸಿದೆ.

"ಇನ್ನು ಸರಿಹೋಗುತ್ತಪ್ಪ, ಕೆಲಸ ಸಿಕ್ತು. ಸಂಪಾದಿಸ್ತೀನಿ. ಅಜ್ಜಿಗೂ ಕೊಡ್ತೀನಿ. ನಿಂಗೂ ಔಷಧಿ ತರ್ತೀನಿ ......"

ತಂದೆ ಸಂತೋಷದಿಂದ ಮುಗುಳ್ನಕ್ಕ . ಆ ನಗುವನ್ನು ಕಂಡು ನನ್ನ ಮುಖ ಅರಳಿತು.

"ಬೆಳಿಗ್ಗೆ ಮತ್ತು ಸಂಜೆ ಪೇಪರ್ ಮಾರೋ ಕೆಲಸ" ಎಂದು ವಿವರಿಸಿದೆ.

"ಸ್ಕೂಲು ಮಾತ್ರ ತಪ್ಪಿಸ್ಕೋಬಾರದು ಚಂದ್ರು. ಇನ್ನು ಎರಡೇ ವರ್ಷ. ಆಮೇಲೆ ಯಾರದ್ದಾದರು ಸಹಾಯ ತಗೊಂಡು ಕಾಲೇಜಿಗೆ ಕಳಿಸ್ತೀನಿ.