ನನಗೆ ಅಳು ಬಂತು. ನಾನು ಮೆಲ್ಲೆನೆ ತಂದೆಯ ಬಳಿ ಸಾರಿ ಕುಳಿತೆ. ಆತ ಕಂಬಳಿಯಿಂದ ಕೈ ಹೊರತೆಗೆದು ನನ್ನ ತಲೆಗೊದಲು ನೇವರಿಸಿದ. ಆದರೆ ಮಾತನಾಡಲಿಲ್ಲ.
ಅಳುತ್ತಳುತ್ತಾ ನಾನು ಹೇಳಿದೆ. ದೊಡ್ಡ ಮನುಷ್ಯ ರಾಮ ಸ್ವಾಮಿಯವರಲ್ಲಿಗೆ ಹೋದುದರಿಂದ ಮೊದಲಾಗಿ, ಶಾಲೆಯನ್ನು ಬಿಟ್ಟುಬಿಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬಂದ ವಿಷಯ ವನ್ನೆಲ್ಲಾ ಹೇಳಿದೆ. ದಿನವೂ ಎಂಟು ಹತ್ತಾಣೆ ಸಂಪದನೆಯಾಗು ತ್ತಿತ್ತೆಂದು ನಾನು ಹೇಳಿದ್ದುದು ಸುಳ್ಳೆಂಬುದನ್ನು ತಂದೆ ತಿಳಿದ.
"ನನ್ತಾವ ಸುಳ್ಳು ಹೇಳ್ದೆ ಅಲ್ವ? ತಂದೆ ಎದುರಲ್ಲಿ ಸುಳ್ಳು ಹೇಳ್ದೆ, ಅಲ್ವ ಚಂದ್ರು"ನಾನೇನು ಹೇಳಬೇಕು?
"ಸಿಗೋ ದುಡ್ದು ಅಜ್ಜಿಗೆ ಕೊಡೋಕು ಸಾಲ್ತಿರಲಿಲ್ಲ. ಅಪ್ಪ ಇಂಜಕ್ಷನ್ನೂ ತರೋಕಾಗಲಿಲ್ಲ. ಸ್ಕೂಲಿಗೆ ಬೇರೆ ಎಲ್ಲಿಂದ ಕೊಡೊದು?ಅದಕ್ಕೆ ಬಿಟ್ಬಿಟ್ಟೆ. ನಂಗೆ ಓದ್ಬೇಕೂಂತ ಆಸೆ ಇತ್ತಪ್ಪ.ಆದರೆ ಏನ್ಮಾಡೋದು? ಬಿಡದೆ ಬೇರೆ ಹಾದಿಯಿತ್ತಾ?"
ಆ ಮಾತಿನಿಂದ ಅವನಿಗೆ ಸಮಾಧಾನವಾಗಲಿಲ್ಲ.
ತಂದೆ ಬಹುವಾಗಿ ನೊಂದುಕೊಂಡಿದ್ದನೆಂಬುದು ಸ್ಪಷ್ಟವಾಗಿತ್ತು. ಆ ನೋವಿನಿಂದ ಆತ ಚೇತರಿಸಿಕೊಳ್ಳಲು ದೀರ್ಘಕಾಲ ಬೇಕೆಂಬುದು ನನಗೆ ತಿಳಿದಿತ್ತು. ಆತ ಆ ಹಗಲು ಬೀದಿಗಿಳಿದು ಸ್ವಲ್ಪ ದೂರ ನಡೆದು ಹೋಗಿದ್ದನಂತೆ. ನಮ್ಮ ಶಾಲೆಯ ಕನ್ನಡ ಪಂಡಿತರು ಅವನ ಕಣ್ಣಿಗೆ ಬಿದ್ದರಂತೆ.......
ತಂದೆ ಅವರನ್ನು ನಿಲ್ಲಿಸಿ, "ನಮಸ್ಕಾರ ಸ್ವಾಮಿ," ಎಂದ.
ಅವರು ಪ್ರತಿ ನಮಸ್ಕಾರ ಕೊಟ್ಟರು. ಆದರೆ ಎಂದೋ ನೋಡಿದ್ದ ನನ್ನ ತಂದೆ ಗುರುತು ಅವರಿಗೆ ಸಿಗಲಿಲ್ಲ.
'ಯಾರು-ಯಾರು?" ಎಂದರು ಅವರು.
"ನಾನು. ಚಂದ್ರೂ ತಂದೆ. ನಿಮ್ಮ ಸ್ಕೂಲಿಗೆ ಬರ್ತಾನಲ್ಲ ಚಂದ್ರಶೇಖರ--ಅವನ ತಂದೆ."