ವನು, ಸ್ಟೇಷ್ನನ್ ಡ್ಯೂಟಿಯ ಪೋಲಿಸಿನಾತ,ಜೇಬಿನಿಂದ ಬೀಡಿತೆಗೆದು ಕಡ್ಡಿ ಗೀರಿ ಹೊಗೆಯುಗುಳಿದ. ಗಾಢವಾದ ಯೋಚನೆ ಯಲ್ಲಿ ತಲ್ಲೀನನಾದ ಹಾಗಿತ್ತು, ಅವನ ಮೂಖಮುದ್ರೆ. ಅದೇನು ಯೋಚನೆಗಳು ಅವನನ್ನು ಕಾಡುತ್ತಿದ್ದವೊ. ನನ್ನನ್ನು ಮಾತ್ರ,ಇಂಥದೇ ಎಂದು ಹೇಳಲಾಗದ ಭೀತಿಯೊಂದು ಆವರಿಸಿತ್ತು ಮನೆಯಲ್ಲಿ ಏನಾಗುವುದು? ಏನಾಗುವುದು?... . . ..
......ನಾನು ಲಾಕಪ್ಪಿನೊಳಗೆ ಕುಳಿತಿದ್ದೆ. ಮನೆಯ ಶೋಧನೆಗೆ ಹೋದವರು ಹತ್ತು ಘಂಟೆಯ ಹೊತ್ತಿಗೆ ಮರಳಿ ಬಂದರು. ಬಂದ ಮೇಲೆ ನನ್ನತ್ತ ಮುಖ ಹೊರಳಿಸಿಯೂ ನೋಡಲಿಲ್ಲ. ನನ್ನ ಬಗ್ಗೆ ಯಾರಿಗೂ ಆಸಕ್ತಿಯೆ ಇದ್ದಂತೆ ತೋರಲಿಲ್ಲ. ನಾನು ಸೊಳ್ಳೆಗಳನ್ನು ತೀಡಿ ಕೊಲ್ಲುತ್ತಾ, ಡುರ್ಗಂಧವನ್ನು ಸಹಿಸಿಕೊಳ್ಳುತ್ತಾ ಹೊತ್ತು ಕಳೆದೆ.
ನಡುರಾತ್ರೆಯ ಹೊತ್ತಿರಬೇಕು. ಇನ್ಸ್‌ಪೆಕ್ಟರ್ ಇನ್ನೂ ಮನೆಗೆ ಹೋಗಿರಲಿಲ್ಲ. ಪೋಲೀಸರವನೊಬ್ಬ ಹೊರಗೆ ಜಗಲಿಯಮೇಲೆ ತೂಕಡಿಸುತ್ತಿದ್ದ.
"ಸ್ವಾಮಿ..............ಸ್ವಾಮಿ.............."
ನಾನು ಬೆಚ್ಚಿ ಬಿದ್ದೆ, ನನ್ನ ತಂದೆಯ ಸ್ವರ–ನನ್ನ ತಂದೆ.ನೆಲ ಎರಡು ಹೋಳಾಗಿ, ನಾನು ಕೆಳಕ್ಕೆ ಇಳಿದುಹೋಗಿ, ತಂದೆಯ ದೃಷ್ಟಿಯಿಂದ ಮರೆಯಾಗಬಾರದೇ ಎನ್ನಿಸಿತು. ಆದರೆ ಆತ ಜಗಲಿಯಮೇಲೆ ನಿಂತು ಬಾಗಿಲಿನ ಎಡೆಯಿಂದ ಲಾಕಪ್ಪಿನೊಳಕ್ಕೆ ನೋಡಿಯೇ ನೋಡಿದ. ನಮ್ಮ ಒಂದೇ ಒಂದಾದ ಹರಕು ಕಂಬಳಿ ಹೊದ್ದು ಆತ ಬಂದಿದ್ದ. ಕುರುಚಲಾಗಿ ಬೆಳೆದಿದ್ದ ಗಡ್ಡ, ಬತ್ತಿ ಹೋಗಿದ್ದ ಕೆನ್ನೆಗಳನ್ನು ಮುಚ್ಚಿತ್ತು, ಕಣ್ಣಗಳು ಆಳಕ್ಕೆ ಇಳಿದಿದ್ದುವು. ಅವು ಚಲಿಸಿದಾಗ ಆ ನೋಟದಲ್ಲಿ ಯಾವ ಭಾವನೆ ಇತ್ತೆಂಬುದನ್ನು ಆಗ ತಿಳಿಯುವುದು ಸಾಧ್ಯವಿರಲಿಲ್ಲ. ಸ್ಟೇಷನ್ನಿನ ಮಂದಪ್ರಕಾಶದಲ್ಲಿ ಅವನು ನನಗೆ ಕಾಣಿಸುತ್ತಿದ್ದ. ಆದರೆ ಲಾಕಪ್ಪಿನ ಕತ್ತಲೆ ನನ್ನನ್ನು ಮರೆಮಾಡಿತ್ತು.