ತಂದೆ ನನ್ನತ್ತ ನೋಡಲೇ ಇಲ್ಲ. ಹಾಗೆ ನೋಡದೆ ಇದ್ದಾಗ ನನ್ನ ದುಃಖ ಇಮ್ಮಡಿಸಿತು.......
ಆದರೆ ಸ್ವಲ್ಪ ಹೊತ್ತಾದಮೇಲೆ,ವಿನೀತನಾಗಿ ಅಧಿಕಾರಿಗೆ ಬಾಗಿ ವಂದಿಸಿ, ಅವನ್ನು ಮೆಲ್ಲನೆ ಹೊರಹೋದ.
ನನಗೆ ನಿದ್ದೆ ಬರಲಿಲ್ಲ. ದುಗುಡದಿಂದ ಹೃದಯ ಹೆಪ್ಪು ಕಟ್ಟಿತ್ತು. ಮುಖ ಬಿಗಿದುಕೊಂಡಿತ್ತು. ಕೈ ಕಾಲುಗಳು ಮರವಾಗಿದ್ದುವು. ದೀರ್ಘವಾದ-- ಬಲು ದೀರ್ಘವಾದ--ಕತ್ತಲೆಯ ದೊಡ್ದ ಗವಿಯೊಳಕ್ಕೆ ತಡವರಿಸುತ್ತ ತಡವರಿಸುತ್ತ ನಾನು, ಮುಂದಕ್ಕೂ ಹೋಗಲಾರದೆ ಹಿಂದಕ್ಕೂ ಹೋಗಲಾರದೆ, ನಿಂತ ಹಾಗಿತ್ತು.
ಒಂದು ಘಂಟೆಯ ಹೊತ್ತಾದ ಮೇಲೆ ಅಧಿಕಾರಿ ಇಬ್ಬರು ಪೋಲೀಸರಿಗೆ, ಅವರಲ್ಲಿ ಮುಖ್ಯಸ್ಥನಿಗೆ, ನಿರ್ದೇಶಗಳನ್ನು ಕೊಟ್ಟು ತಾನು ಮನೆಗೆ ಹೊರಟನು. ಆ ನಿರ್ದೇಶಗಳಲ್ಲಿ ನನಗೆ ಸಂಬಂಧಸಿದ್ದು ಏನೂ ಇರಲಿಲ್ಲ.
ಅಧಿಕಾರಿ ಬೀದಿಗಿಳಿಯುತ್ತಿದ್ದಂತೆ ಆತನ ಸ್ವರ ಕೇಳಿಸಿತು.
"ಇನ್ನೂ ಇಲ್ಲೇ ಇದ್ದೀಯೇನೋ? ನಡಿ ಆಚೆಗೆ, ರಾಸ್ಕಲ್! ಇಲ್ದಿದ್ರೆ ನಿನ್ನೂ ಲಾಕಪ್ಪಿಗೆ ಸೇರಿಸ್ತೀನಿ. "
ನನ್ನಪ್ಪ ಇನ್ನೂ ಅಲ್ಲೆನಿಂತಿದ್ದ. ಮನೆಗೆ ಹೋಗಿಯೇ ಇರಲಿಲ್ಲ. ಕ್ಷಯದ ಕಾಹಿಲೆಯ ಆ ಜೇವ ಹೊರಗೆ ಶೀತದಲ್ಲಿ ಚಳಿಯಲ್ಲಿ ತೋಯ್ದು ಕೊಳ್ಳುತ್ತಿತ್ತು......
ಆಮೇಲೆ ಯಾವ ಸದ್ದೂ ಕೇಳಿಸಲಿಲ್ಲ. ನಿಮಿಷಗಳು ಘಂಟೆಗಳಾದುವು. ಪ್ರತಿಯೊಂದು ಘಂಟೆಗೆ ಪೋಲೀಸಿನವನು ಗಂಟೆ ಬಾರಿ ಸುತ್ತಿದ್ದ. ಹಾಗೆ, ರಾತ್ರಿ ಮೆಲ್ಲಮೆಲ್ಲನೆ ಕರಗಿತು. ಬೆಳಗು ಮುಂಜಾವ ನನಗೆ ಜೊಂಪು ಹಿಡಿದಿರಬೇಕು. ಒರಗಿದಲ್ಲಿಯೆ ನಾನು ನಿದ್ದೆ ಹೋಗಿದ್ದೆ, ಎಚ್ಚರಾದಾಗ ಸ್ಟೇಷನಿನ ಗೋಡೆ ಗಡಿಯಾರದ ಮುಳ್ಳುಗಳು ಆರೂವರೆಯನ್ನು ಸೂಚಿಸುತ್ತಿದ್ದುವು.
ಬೆಳಗಾಗಿತ್ತು. ಇನ್ನು ಬಿಡುಗಡೆಯಾಗಬೇಕು, ತಂದೆ ಪ್ರಾಯಶಃ ರಾತ್ರಿಯೇ ಮನೆಗೆ ಹೋಗಿರಬಹುದೆಂದು ಭಾವಿಸಿದೆ.