ಪುಟ:Vimoochane.pdf/೯೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೯೨
ವಿಮೋಚನೆ

ಹೃದಯ ಸೋರಿಹೋದಮೇಲೆ ಮತ್ತೆ ಒರತೆ ಬರುವುದು ಯಾವ ನ್ಯಾಯ?"

ಅಜ್ಜಿಯ ಸ್ವರ ನಡುಗುತಿತ್ತು. ಕೆಂಪು ಸೀರೆಯ ಸೆರಗು ಆ ಕಣ್ಣುಗಳನ್ನು ಮುಚ್ಚಿಕೊಂಡಿತು.

"ನನ್ನ ಬಿಟ್ಹೋಗ್ತೀಯಾ ಚಂದ್ರೂ? ಅಜ್ಜೀನ ಬಿಟ್ಟು ಹೋಗ್ತಿಯೇನೊ ಮರಿ?"

ಆ ಕ್ಷಣ, ನಾನು ಮಹಾಪರಾಧ ಮಾಡುತ್ತಿದ್ದೆನೆಂಬ ಭಾವನೆ ಮೂಡಿತು. ತಂದೆ ಇದ್ದಾಗ ನಾನು ಅವನಿಗೆ ಒಂದು ದಿನವೂ ಮನ ಶ್ಯಾಂತಿ ಕೊಟ್ಟಿರಲಿಲ್ಲ. ಈಗ ಇನ್ನೊಂದು ಜೀವದ ಮನಸ್ಸನ್ನು ನೋಯಿ
ಸಲು ಸಿದ್ಧನಾಗಿದ್ದೆ.

ಇಲ್ಲ; ನಾನು ಈ ಅಜ್ಜಿಯನ್ನು ಬಿಟ್ಟು ಹೋಗಬಾರದು-ಎಂದು ಕೊಂಡೆ. ಆದರೆ ಮನಸ್ಸು ಮತ್ತೆ ಹೊಯ್ದಾಡಿತು.

"ಅಜ್ಜಿ. ಒಂದಷ್ಟು ದಿನ ಎಲ್ಲಾದರೂ ಇದ್ದು, ತಿರ್ಗ ಬರ್ತೀನಿ ಅಜ್ಜಿ. ನಿಮ್ಮಲ್ಲಿಗೇ ಬರ್ತೀನಿ ಅಜ್ಜಿ."

ಆಗ ಆ ಅಜ್ಜಿ ನಾನು ನಿರೀ‍‍ಕ್ಷಿಸದೆ ಇದ್ದ ಇನ್ನೊಂದು ವಿಷಯ ಹೇಳಿದರು.

"ನೋಡು ಚಂದ್ರು. ಒಂದಿನ್ನೂರು ರೂಪಾಯಿ ಎತ್ತಿಟ್ಟಿದ್ದೀನಿ. ಬದುಕಿರೋವಾಗ ಯಾವ ಸಂಬಂಧಿಕರೂ ಯಾವ ಊರಿನಿಂದಲು ಬರ್ಲಿಲ್ಲ. ಸತ್ಹೋದಮೇಲೆ ಯಾಕೆ ಬೇರೆಯವರಿಗೆ ಕೊಡ್ಲಿ? ನೋಡ್ಮರಿ, ನಿಂಗೆ ಸ್ಕೂಲಿಗೆ ಹೋಗೊ ಇಷ್ಟ ಇದ್ರೆ ಹೇಳು, ಕಳಿಸ್ತೀನಿ.... ....... ಈ ಮನೆ ಎಮ್ಮೆ ಎಲ್ಲಾ ನಿಂದೇನೆ........"

ಇಂತಹ ಮಾತುಗಳೆಲ್ಲಾ ನಾನೆಂದೂ ತೀರಿಸಲಾರದ ಋಣದ ಭಾರವನ್ನು ಹೆಚ್ಛಿಸುತ್ತಿದ್ದವು........ವಿದ್ಯಾಭ್ಯಾಸದ ಆಸೆ ಹುಟ್ಟಿಸಿ ನನ್ನನ್ನು ಅಲ್ಲಿಯೇ ಇರಿಸಿಕೊಳ್ಳಲು ಆಕೆ ಯತ್ನಿಸಿದರು. ಆ ಮಾತುಗಳನ್ನು ಅವರು ಹೇಳುತ್ತಿದ್ದಂತೆ, ನಾನು ಯೋಚಿಸುತ್ತಲಿದ್ದೆ. ಇಲ್ಲ, ಮತ್ತೊಮ್ಮೆ ವಿದ್ಯಾರ್ಥಿಯಾಗುವುದು ನನ್ನಿಂದಾಗದ ಮಾತು--- ನನ್ನಿಂದಾಗದ ಮಾತು.