ವಿಷಯಕ್ಕೆ ಹೋಗು

ಪುಟ:Vyshakha.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

117

ಬಂದುಬುಟ್ಟವನೆ. ಗುಡ್ಲು ವಳೀಕೆ ಬಂದೋನೆ ಬಂದ. ತಣಿಗೆ ಮಡಿಕ್ಕಂಡು ಕುಂತ. ‘ಕಲ್ಯಾಣಿ’ ಅಂತ ಗರ್ಜುಸ್ದ. ಕಾದು ಕಾದು ಸುಸ್ತಾಗಿ ವಕ್ಕಡೆ ಮೂಲೆಗೆ ಬಿದ್ದಿದ್ದ ಅವ್ವ, ಮಯ್ಯ ಮುರುದು ಯೇಳ್ತ.

“ರೋಜಿನ ಇದೇ ಕೊಳೆ ಪಂಚಾತಿ ಆಗೋಯ್ತು. ಒಂಜಿನ ಆದ್ರೂವೆ ಗ್ರಾಸ್ತರಂಗೆ ಬಂದು ವೊತ್ತಿಗೆ ಮುಂಚೆ ಉಂಡು ಮನಗಾನ ಅನ್ನಾ ಬುದ್ಯ ಕ್ವಡ್ನೇ ಇಲ್ವಲ್ಲ ಆ ದ್ಯಾವರು?” ಅಂದುಕೊತ್ತ ಬಂದು ಇಟ್ಟಿನ ಮುದ್ದ ಅಯ್ಯನ ತಣಿಗೆಗೆ ನೀಡಿದಳು. ಲಕ್ಕನೂ ಅಯ್ಯನ ಎದರಾಬದುರು ಉಣ್ಣಕ್ಕೆ ಕುಂತಿದ್ದ. ಅವ್ವನ ಮಾತು ಹಸಿಗಂಡು ಬಂದಿದ್ದ ಅಯ್ಯನ ಕಚ್ಚಿದಂಗಾಗಿ ಕ್ಯಾಣ ಇಸ ಏರಿದಂಗೆ ಅವನ ಮೊಖದಲ್ಲಿ ಮುಕ್ಕಳುಸ್ತು.

“ಉದಕ ಯಾತರದ?-ಬಾಡಿನ ಎಸರ?” ಕ್ಯಾಳಿದ ಅಯ್ಯ.

“ಊ, ಬಾಡಿನೆಸರ ರೋಜಿನ ಮಾಡಕ್ಕೆ ನೀನು ತಂದು ಮಡಗಿದ್ದೀಯಲ್ಲ ಗೆಪ್ಯ?... ಸಮ್ಕೆ ಉಣ್ಣು. ವಳುಗಿಲ್ಲ ಮಗಳ ದೊಗದಿಕ್ಕು ಅಂದ್ರೆ, ನಾ ಇನ್ಯಾವ ಬೂಮಂಡಲದಿಂದ ತಂದು ವದುಗಿಸ್ಲಿ? ಅನ್ತಾ ಅನ್ತಾ ಉಪ್ಪು ಸಾರ ತಂದು ನೀಡಿದ್ಲು.

ಇಟ್ಟಿನ ಮುದ್ದೆ ಮ್ಯಾಲೆ ಕಯ್ಯಾಡಿಸ್ತಿದ್ದ ಅಯ್ಯ, ಉಪ್ಪು ಸಾರ ಮರದ ಸೊಟಗದಿಂದ ಬುಡುವಾಗ ಬಕ್ಕಂಡಿದ್ದ ಅವ್ವನ ಕೆನ್ನೆಗೆ ಚಟ್ಟನೆ ಅಯ್ದು ಬೆಳ್ಳೂ ಮೂಡೊ ತರ ಬಡ್ದ.

“ಕೆಟ್ಟೆನೆಲ್ಲಪ್ಪೊ” – ಚಿರಿ, ಕುಕ್ಕನೆ ಕುಂತು, ಅವ್ವ ಎದೆ ಎದೆ ಬಡುಕುತ್ತ, “ನಾ ನಿನ್ನೆದುರ್ಗೆ ಇರೆ ತಾನೆ ನಿಂಗೆ ಕ್ಯಾಣಸರ. ನಾ ಕಣ್ಮುಚ್ಚಿಗಂಡ್ರೆ, ಆಗೇನ ಮಾಡೀ?... ಆಗ ನಿನ್ನ ಕ್ಯಾಣ ಒಂದೆ ಕುಂತು ಈ ಗುಡ್ಲು ನೆರಿಕೆ ಪಸೀಬೇಕು, ವೋಟೇಯ” ಅಂದೋಳೆ, ಜಟ್ಟನೆದ್ದು ಗುಡ್ಲು ಮಂಚೂರಿ ತಡಿಕೆ ಕದಾವ ತಳ್ಳಿ, ಕೆರೆ ದಿಕ್ಕ ನಡೀತಿದ್ಲು.

ತಾನೆದ್ದು ಮುಲುಕಾಡೊ ವೋಟ್ರಲ್ಲಿ, ಅಯ್ಯ ದಡ್ಡನೆದ್ದ-

“ನಿಂತುಗಣೆ... ಕಲ್ಯಾಣಿ-ನಿಂತುಗಣೆ...” ಕೂಗ್ತ, ಅವ್ವನ ಇಂದಿಂದೆ ಓಡ್ದ. ತಾನು ಗುಡ್ಲು ಮುಂದಕೆ ಬಂದು ನಿಂತೋನು, ತಾನು ಅವರ ಹಿಂದೆ ವೋಗೋದೊ ಬ್ಯಾಡದೊ ಚಿಂತಿಸ್ತಾ ಇರೋನೂವೆ-

ಕೆರೆ ಓಣಿ ತಲೆಕೊಟ್ನಲ್ಲೆ ಅವನ್ನ ಇಡುದು ನಿಲ್ಲುಸಿ, ದಮ್ಮಯ್ಯ ಅಂದು, ದತ್ತಯ್ಯ ಅಂದು, ನಾ ಇನ್ನು ಕ್ವಾಪ ಮಾಡಿಕಂಡ್ರೆ ನಿನ್ನ ಅಳೆ ಪಾಪಾಸ ತಕ್ಕಂಡು ಹ್ವಡಿ- ಅಂತ ಬೆಣ್ಣೆ ಮಾತಾಡಿ, ಅಯ್ಯ ಅವ್ವನ್ನ ಇಂದ್ಕೆ ಕರಕೊಂಬಂದಿದ್ದ.