ನಾನು......ನಾನು ಬೂಪತನಾದ ಏಡೇ ವರುಸಕೆ ಈ ಪ್ರತುವಿಗೆ ನಮ್ಮವ್ವ ಕ್ವಟ್ಟ ಕೊನೇ ಫಸಲು-ನನ್ನ ತಂಗಿ ಸಿವುನಿ!....
ಉಟ್ಟಿರೋದು ಎಸರಿಗೆ ನಾಕು ಕುಳ ಆದರೂವೆ, ಈಗ ಉಳಿದಿರೋದು-ಸಿವುನಿ, ನಾನು ಇಬ್ಬರೇಯ!... ಅವಳಿ ಗಂಡು ಸಣ್ಣಕೆ ಕಡ್ಡಿಯಾಗೆ ಉಟ್ಟಿ, ಬದುಕಿರಾ ಅತ್ತುತಿಂಗಳೂವೆ ನವದೂ ನವದೇ ಸತ್ತೊಯ್ತಂತೆ. ಈಗಳೂವೆ ಅವ್ಬಂಗೆ ಗಾಳಿ ಬಿಸಿದಂಗೆ ಯಾವಾಗಲಾರೂ ಆ ಕೂಸಿನ ಗ್ಯಾಪನ ಬರಾದುಂಟು. ಆಗ “ಇದಿಯಮ್ಮ ಆ ಕೂಸಿನ ಕಣ್ಣು ಮೂಗ ಬೋ ನೀಟಾಗಿ ತಿದ್ದಿದ್ಲು ಕನೋ, ಲಕ್ಕ. ಅದ್ನ ದಕ್ಕಿಸಿಕಳಾಕೆ ಮುಕ್ಯ ನಾವು ಅದ್ರುಸ್ಟ ತಂದಿರನಿಲ್ಲ.”- ಯೋಳ್ತ ಯೋಳ್ತ, ಕಣ್ಣೀರ ಚೆಲ್ಲಾಡಿಸಿದ್ಲು ಅವ್ವ!...
ಇನ್ನೊಂದು ಅವಳಿ ಎಣ್ಣು-ಅವಳೇನೂ ಉಲುಮ¯ವಾಗಿ ಬೆಳುದು ಒಳ್ಳೆ ಕಡೀಕೆ ಲಗ್ನಾಗಿದ್ರೂವೆ, ಮೊದಲ್ನೆ ಕನ್ನೆರಿಗೇಲೆ ಮೊಗೀನ ಸೈತ ಪ್ರಾಣ ಬುಟ್ಟಿದ್ದು... ಅವಳು ಸತ್ತದ್ದೆ ಸತ್ತದ್ದು ಬ್ಯಾರೆ ಊರಿನ ನಮ್ಮ ಭಾವಂಗೂ ನಮ್ಗೂವೆ ಹೊಕ್ಕಳ ಸಮ್ಮಂದವೇ ಕಡುದೋಯ್ತು. ಅವ್ನು ಬ್ಯಾರೆ ಲಗ್ಣ ಆದಾಗ್ಲೂ ಬೂಪ ನಮ್ಗೆ ಯೋಳಿ ಕಳಿಸನೇ ಇಲ್ಲ!.... ಗೆಜ್ಜುಗಣ್ಣ ಮಾತ್ರ ಇರೋವರೆಗೂವೆ ನಮ್ಮ ಗುದ್ಲ ತಾಳಗಂಬದ ತರ ನಮ್ಮ ಸಂಸಾರಕ್ಕೆ ಬಲಭುಜವಾಗಿದ್ದ!-
ಲಕ್ಕನ ಆಲೋಚ್ಣೆಯ ಒಂದು ತಿಗಣೆ ಕಚ್ಚಿ ತುಸ ಬ್ಯಾಳ್ಯ ಅಡ್ಡಗಟ್ಟೆ ಆಕಿತ್ತು. “ಹಾಳುಗೇರಿ ತಿಗಣೆ ತಾನೆ ಯಾಪಾಟ ಎಚ್ಚವೆ ಈ ಗುಡ್ಲಲ್ಲಿ!” ಗೊಣಗಿ, ಚಡ್ಡಿ ಒಳಗೆ ಹರಿದಾಡೊ ತಿಗಣೆಯಮ್ಯಾಲಿನಿಂದಲೆ ಹೊಸಗಾಕ್ದ. ಪುನಾ ನಿಂತೋದ ಅವನ ಆಲೋಚ್ಣೆ ಚಾಲೂ ಆಯ್ತ...
ಅಣ್ಣನ ಕುರುತೇ ಮನಸು ಸುತ್ತಾಡ್ತ ಇದ್ದದ್ದು, ಗೆಜ್ಜುಗಣ್ಣನ ರೂಪವ ಲಕ್ಕನ ಮುಂಡ್ಕೆ ಕಡೆದು ನಿಲ್ಲಸಿದಂಗಾಯ್ತು: ಗಣೆಮರ ಬೆಳುದಂಗೆ ಬೆಳಿದಿದ್ದ ಎತ್ತರದ ಆಳು, ಮೊಖದಾಗೆ ಮಾರಮ್ಮ ಕಳ್ಳುಮುಳ್ಳು ಹೂದು ಅಲ್ಲಲ್ಲಿ ಸಣ್ಣಸಣ್ಣಗುಳಿ ಬಿದ್ದಿದ್ರೂವೆ, ಗೆಜ್ಜುಗಣ್ಣನೆ, ತನಗಿಂತಲೂವೆ ಎಚ್ಚಾಗಿ ಅಯ್ಯನ ವೋಲಿಕೆ ವೊತ್ತೋನು. ನಗಸಾರ ಮಾಡಾದರಲ್ಲೂ ಥೇಟ್ ಅಯ್ಯನೆ! ಯಾವ ಕೇಮೆ ಅದ್ರೂ ಸೈ, ಅಯ್ಯನ್ನೆ ಒಂದು ಕೈ ಮೀರಿಸೋನು!... ಅದುಕೇ ಊರಿನ ದೊಡ್ಡ ದುಳಗೊಳೆಲ್ಲ ಯಾವ ಕೇಮೆ ಬಿದ್ದರೂ ಮೊದ್ಲು ಉಡುಕ್ತಾ ಇದ್ದದ್ದು ಗೆಜ್ಜುಗಣ್ಣನ್ನೆ!...ಪಸಂದಾಗಿ ಗೇಯೊ ಎತ್ತು ಯಾರಿಗೆ ಬ್ಯಾಡದು?...
ನಮಗೂ ನಾಕು ಎಕರೆ ಕುಸ್ಕಿ ಜಮೀನಿತ್ತು. ಅಯ್ಯನ ಲಗ್ಣದಲ್ಲೆ ಕೆಂಗಣ್ಣಪ್ಪನ ಅತ್ರ ಮಾಡ್ದ ಸಾಲಕೆ ಬಡ್ಡಿ ಯೇರಿ ಯೇರಿ ಅಪ್ಪಾರ ಆಗಿ, ಅಯ್ಯ ಅಣ್ಣ