125
ಒಂದಿದ್ರೆ ಗೆಜ್ಜುಗಂಗೆ ಈ ಪರ್ಪಂಚದಾಗೆ ಬ್ಯಾರೆ ಯಾವ್ದೂ ಬ್ಯಾಡ. ನೀರು ಕಂಡ ಕಡೆ, ಅದರೊಳೀಕೆ ಬಿದ್ದು ಈಜು ವೊಡಿಯೊ ತೆವಲು. ಈ ತೆವಲು ಕಂಡೇ ನೆಮ್ಮೂರಿನೋರು” ಇವನೆಲ್ಲೊ ಇಂದಿನ ಜನ್ಮದಲ್ಲಿ ಎಮ್ಮೆ ಕ್ವಾನ ಆಗಿರಬೇಕು!” ಅಂತಿದ್ರು.... ಬೇಕಾರೆ-ಮೂಡ್ಲಲ್ಲಿ ಸ್ವಾಮಿ ಉದಯವಾಗಿ, ಸಂದೆ ಕತ್ತಲ್ನಲ್ಲಿ ಕರಗೋಗುಂಟ ನೀರಿನಲ್ಲಿ ಬಿದ್ದಿರ್ತಿಯೇನ್ಲ ಅಂದರೆ, ಓ-ಸೈ, ಬಿದ್ಕಂಡೇ ಇರ್ತೀನಿ, ಅನ್ನಾ ಬೂಪ!...
ಈಚೆ ದಡದಲ್ಲಿ ಮೂರು ನಾಕು ಜನ, ಆಚೆ ದಡದಲ್ಲಿ ಏಡೊ ಮೂರೊ ಆಳು ನ್ವಾಡ್ತಿದ್ದಂಗೇಯ ಅಂಗಿ ಕಳುಚಿ ದಡದ ಮರಳಿನಲ್ಲಿ ಎಸ್ದು, ಹೊಳೆ ನೀರಿಗೆ ದುಢುಂನೆ ಬಿದ್ದಿದ್ದೆ ಬಿದ್ದಿದ್ದು!... ಇವನು ಈಜ ವೊಡೆಯೊ ಕುಸಾಲು ನ್ವಾಡ್ತ ಏಡೂ ಕಡೆಗಿದ್ದ ಜನ,
“ಯಾವೋನಪ್ಪ ಇವನು? –ಈಟು ಸೊಕ್ಯಾಗಿ ಈಜ ವೋಡೀತಾ ಅವ್ನಲ್ಲ?”... ಅಂತ ಬೆರುಗಾಗಿ ಮೂಗಿನ ಮ್ಯಾಲೆ ಬೆಳ್ಳಿಟ್ಟುಗಂಡು ಗೊಂಬೆಗಳ ತರ ನಿಂತಿದ್ರಂತೆ!...
ಅರ್ದ ಮುಕ್ಕಾಲು ಗಂಟೆ ಸ್ವೇಚ್ಚಾಗಿ ಈಜುತಾ ಇದ್ದೋನು, ಮೀನಿನಂಗೆ ನೀರಿನಲ್ಲಿ ಇಲ್ಲಿ ಮುಳುಗಿ ಅಲ್ಲೆದ್ದು, ಪುನಾ ಮುಳುಗಿ ವಸಿ ಸಮಯ ಯಲ್ಲೂ ಕಾಣಿಸ್ದೇ ಇರ್ವಾಗ, ಆಚೆ ಈಚೆ ದಡದ ಜನ ಮುಳುಗೋದ್ನೋ ಯೇನೊ ಅಂತ ಗಾಬರಿ ಆಗಿದ್ರಂತೆ, ದೂರದಲ್ಲಿ ಪುನಾ ನೀರಿನಿಂದ ಮ್ಯಾಕ್ಕೆ ಕಾನುಸ್ದ ಅವನ ತಲೆ ಕಂಡು ಅವ್ರಿಗೆ ಸಮಾಧಾನ ಆಯ್ತಂತೆ... ಮತ್ತೆ ಈ ಮಾರಾಯ ನೀರಿನಲ್ಲಿಯೆನೇನೊ ಕಸರತ್ತು ಮಾಡ್ತಿದ್ದು, ವಸಿ ವೊತ್ತು, ಸತ್ತ ಹೆಣದಂಗೆ ಅಂಗಾತ್ತ ನೀರಿನ ಮ್ಯಲೆ ತೇಲ್ತಿದ್ದನಂತೆ... ಕಡೀಕೆ ಪುನಾ ಮಕಾಡೆ ಆಗಿ, ಕಯ್ನಲ್ಲಿ ನೀರು ಬಡೀತ ಜೋರು ಜೋರ್ನಿಂದ ಈಜಕ್ಕೆ ಸುರುಮಾಡಿದ್ನಂತೆ...
ಇಂಗೆ ಕುಸಾಮತ್ನಿಂದ ಈಜುತಾ ಈಜುತಾ ಮುಂದು ಮುಂದ್ಕೆ ವೋಯ್ತಾ ಇದ್ದೋನಿಗೆ ಇದ್ದಕ್ಕಿದ್ದಂಗೆ ಏಡೂ ದಡದ ಕಡೆಗಿದ್ದ ಮಂದಿ ಕೂಗಿಕಂಡ್ರಂತೆ:
“ಅದು ನಿರಿನ ಮಡು. ಅಲ್ಲಿ ಸೆಳುತ ಅದೆ. ಆ ಕಡೀಕೆ ವೋಗಬ್ಯಾಡ...”
ಅವರು ಕೂಗು ಆಕದ್ದು ಅಣ್ಣಂಗೆ ಕ್ಯಾಳಿತೊ, ಇಲ್ಲವೊ... ಗಾಚಾರ, ಅಂಗೇ ಮಯ್ಯಿಮ್ಯಾಲೆ ಗ್ಯಾನ ಇಲ್ಲದೇಯ ಈಜುತ ಈಜುತ ಮಡು ಇದ್ದ ಜಾಕ್ಕೇ ವೋಗಿ, ಅಲ್ಲಿ ನೀರಿನ ಸೆಳುತಕ್ಕೆ ಸಿಕ್ಕಿ, ಅದು ಅವನ್ನ ವಳೀಕೆ ಎಳಕಂಡತಂತೆ. ಜಾಗ ಹ್ವಸದು. ಅಣ್ಣಂಗೆ ತಿಳೀನಿಲ್ಲ. ಎಂತಾ ಸುಳೀಗೆ ಸಿಕ್ಕಿದ್ರೂ ಪಾರಾಗೊ ಗಂಡೇಯ. ತಟ್ಟನೆ ಕಾಲ ಇಡುದು ಎಳದಂಗಾಗಿರಬೇಕು. ವಳೀಕೆ ವೊಂಟಡೋಗಿರಬೇಕು...