ವಿಷಯಕ್ಕೆ ಹೋಗು

ಪುಟ:Vyshakha.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128



ನಂಗೆ ಲೆಕ್ಕಾಚಾರ ಮಾಡಕ್ಕೆ ಬರೋಲ್ಲದಲ್ಲ?” – ಅಂದು, ನನ್ನ ಕಡೀಕೆ ತಿರುಗಿ, ಕಣ್ಣ ಕಿವುಕಿ, ತುಂಟಾಟದ ನಗ ನಕ್ಕು, ಅಮ್ಯಾಕೆ ಮೊಖ ಬಿಕ್ಕಂಡು ಗಂಬೀರ್ವಾಗಿ-

“ನ್ವಾಡೋ ನಿಂಗ. ನಿಯತ್ತಿರೋರ ತಾವು ಈ ಲೆಕ್ಕಾಚಾರ ಗಿಕ್ಕಾಚಾರ ಯಾವುದೂವೆ ಬೇಕಾಗೇ ಇಲ್ಲ. ನೀಯತ್ತಿಲ್ದೆ ಇರೋರತ್ರ ಮಾತ್ರ ಮಯ್ಯೆಲ್ಲ ಕಣ್ಣಾಗಿ ಲೆಕ್ಕ ಮಾಡ್ಕಾಬೇಕಾಯ್ದದೆ... ಒಂದು ಮಾತು ಯೋಳ್ತೀನಿ ಕ್ಯಾಳು. ಸಾಚ ಯಾವಾನು, ನಸ್ಲಹರಾಮ್ ಯವಾನು ಅನ್ನೋದ ಪತ್ತೆ ಮಾಡಾದು ಒಬ್ಬ ಗನಂದಾರಿ ಇಸ್ಯಾವ?... ಒಬ್ಬ ಮನುಸ ನಡದಾಡೋ ರೀತೀಲಿ, ಯದುರ್ನಲ್ಲಿ ನಿಂತುಗಂಡು ಮಾತಾಡೋ ವರಸೇಲಿ, ಅವ್ಣ ಯೋಗ್ತೇಯ ಅಳೆಯಕ್ಕಾಗಕ್ಕಿಲ್ವ? ಈಗ ತತ್ವ ತಕರಾರು ತಕ್ಕಂಡೇನ? - ನಿನ್ನ ಹೈದ್ನ ನೀ ಕರದಂಡು ವೋಗು. ಅವ್ನು ಇದ್ಯ ಕಲ್ತು ಸಂಪನ್ನಾಗಿ ಬದುಕ್ಲಿ”- ಹರಸಿ, ನಾವಿಬ್ರೂವೆ ಕಯ್ಯಿ ಮುಕ್ಕೊಂಡೆ ಬೀದಿಗೆ ಇಳಿತಿರೋನೂವೆ ಅಟ್ಟಿ ಮುಂಬಾಗಿಲವರ್ಗೂ “ಅದ್ರೂವೆ, ನಿನ್ನ ಕಾಣದೆ ಇದ್ರೆ ಸಿಬ್ರಿ ಆಯ್ತದೆ ಕನೊ, ಲಕ್ಕ... ಒಗ್ಗಿದ ಪದಾರ್ತವ ಬುಟ್ಟು ಕಳುಸೋದು ಪರಮ ಕಸ್ಟ.. ಆಗಿಂದಾಗ ಬತ್ತಾ ಇರು. ಈ ಮುದುಕಿ ಬಿದ್ದೋಗೊ ಮರ, ಬೀಸೋಗೊ ಗಾಳಿ ಅಂತ ಮರ್ತು ಗಿರ್ತು ಬುಟ್ಟೀಯೆ, ಜ್ವಾಕೆ.. ಆಗೀಗ ಬಿಡುವು ಆದಾಗ ಬಂದು, ನನ್ನ ಕಯ್ಯಿ ಕೆಲುಸ ಕಿತ್ಕಂಡು, ಸಾಯ ಮಾಡು-ನಾನೂವೆ ನೀ ಮಾಡ್ದ ಕೇಮ್ಗೆ ಅಸ್ಟೊ ಇಸ್ಟೊ ಕ್ವಟ್ಟೇ ಕ್ವಡ್ತೀನಿ” ಅಂದಿದ್ದರು...

ಕೆಂಗಣಪ್ಪ ಕ್ವಟ್ಟಿದ್ದ ಆರುನೂರು ರೂಪಾಯ್ನಲ್ಲಿ ನುರು ರೂಪಾಯಿ ಅಂಗೋಯ್ತು. ಇನ್ನುಳಿಕೆ ಐನೂರು ರೂಪಯ್ನಲ್ಲಿ ನುರು ರೂಪಾಯಿ ಅಣ್ಣ ಸತ್ತಾಗ ಅದಕೆ ಇದಕೆ ಕರ್ಚಾಗೋಗಿತ್ತು – ಇನ್ನು ಅವ್ವನ ತಾವು ಉಳಿದದ್ದು ನಾನೂರು ರೂಪಾಯಿ. ಅದ್ನ ತಕ್ಕಂಡು, ಅಯ್ಯ ನನ್ನೂ ಕರ್ಕಂಡು, ಕೆಂಗಣ್ಣಪ್ನ ಅಟ್ಟೆ ತಾವಿಕೊಕೋಗಿ,

“ಸೋಮಿ-ಕೆಂಗಣಪ್ಪಾರೆ... “ಅಂತ ಅವರ ಅಟ್ಟಿ ಆಚ್ಗೇ ನಿಂತು ಕರೆದಾಗ,

“ಯಾಕೆ ಬಂದ್ಯೋ, ನಿಂಗ?” ಅಂತ ವೊರೀಕೆ ಬಂದೋಳು ಅವ್ನ ಎಡತಿ ಸಿದ್ದಮ್ಮ.

ಕೆಂಗಣಪ್ಪಂಗೆ ಸರ್ಯುಆದ ಎಡತಿ ಕ್ವಟ್ಟದ್ದ ದ್ಯಾವರು. ಕೆಂಗಣ್ಣಪ್ನ ಸೇರಿಗೆ ಅವಳು ಸವ್ವಾಸೇರು! ಅವಳ ಮುಂದೆ ಅವನೇನಾರ ಬಾಯಿ ಬಿಚ್ಚಕ್ಕೆ ಅಪ್ಪಣೆ ಉಂಟ?- ಯಾವತ್ತೂವಿ ಒಳ್ಳೆ ಉಲಿ, ಉಲಿ ಬಿದ್ದಂಗೆ ಬಿದ್ದು ಬುಡೋಳು!.. ಅವಳ ಕಂಡು, ಈ ಎಂಗಸಿನ ಕುಟ್ಟೆ ಯಾಕೆ ಮಾತು, ಇವಳತ್ರ ಯವಾರ ಸುದ್ದಿಲ್ಲ, ಅಂದುಕಂಡೋಯಾನೊ-