134
“ನಾವು ಇಂಗೆ ಅಳ್ತಾ ಕುಂತರೆ, ಯವ ಸುಕವ?... ನಾನು ಜೀತಕೆ ಇರಬೇಕಾಯ್ತಲ್ಲ ಅಂತಾನ ನಾ ಚಿಂತೆ ಮಾಡಕ್ಕಿಲ್ಲ, ಆದ್ರೆ, ನಮ್ಮ ಲಕ್ಕನ ಇಂದ್ಕೆ ಆ ಮಟದ ಉಪಾದಯ್ ಯಾನೋ ನೆಪ ತಕ್ಕಂಡು ಮಟ ಬುಡಸಿದ್ದ. ಈಗ ಪುನಾ ಮಟ್ಟಕ್ಕೆ ಸೇರುಸಾವ, ಬ್ಯಾರೆ ಉಪಾದ್ಯ ಬಂದವ್ನೆ ಅಂದರೆ- ಈಗ ಅನದ ಉಪಾದಿ ಅಗುತುಕಂಡದೆ!... ಇದೇ ನನ್ನ ಮಿದ್ಲೆ ಕೆಡುಸ್ತಾ ಇರಾದು” ಅಂತ ನನ್ನ ಇಸ್ಯ ತಕ್ಕಂಡ.
ಅವ್ವ, ಉಸ್ ಅಂತ ಉಸುರು ಬುಟ್ಟು-
“ಬಾಳಾಟ- ಉದ್ದಕ್ಕೂ ನಮ್ಮಿಬ್ಬರ್ಗೂವೆ ಯಾgತರಲ್ಲೂ ನಸೀಬ ತರನಿಲ್ಲ. ಅದು ಯೆಲ್ಲಾರ ಹಾಳುಬಿದ್ದೊಗ್ಲಿ ಅಂದ್ರೆ, ಈ ಎಲೆ ವಯಸ್ನಲ್ಲೆ ನಮ್ಮ ಲಕ್ಕನ ಅಣೇಲಿ ಇಂಗು ಬರದು ಬುಡಾದ...” ಅಂತ ಸೋಕ ಮಾಡ್ತಾನೆ ಇದ್ಲು ಏಡು ನಾತ್ರಿ-ಯಾನು ಮಾಡಾದು? ಯಾನು ಮಾಡಾದು? ಅನ್ನಾ ಚಿಂತ್ಯೆ ನಮ್ಮೆಲ್ಲಾರ ನಿದ್ದೆ ಕೆಡುಸಿತ್ತು. ಅಳ್ತ ಅಳ್ತಾನೆ ಅವ್ವ,
“ಬ್ಯಾರೆ ಉಪಾಯ ಯಾನ ಈಗಿರಾದು?... ಆ ಸಿದ್ದಮ್ಮಾರ ಮತನೂ ತಗದಾಕೊ ಅಂಗಿಲ್ಲ. ಅಂಗೇ ಯೋಚ್ಣೆ ಮಾಡುದ್ರೆ, ನಮ್ಮ ಲಕ್ಕದ ದೊಡ್ಡ ಚಾಕರಿ ಸಿಕ್ಕೊವೊಟು ಓದಿಸಕ್ಕೆ ನಮ್ಮ ತಾವೇನು ಗೆಪ್ಪೆ ಇದ್ದಾತ?... ಆ ಇದ್ಯದ ಮನೆ ಕಿಸಾಂತರಾಯ್ತು. ಈಗ ಆ ಅಯಿವತ್ತು ರೂಪಾಯ ವೊಂದಿಸಾದೆಂಗೆ?”- ಪ್ರಸ್ನೆಯೆತ್ತಿದ್ಲು.
ಅಯ್ಯನ ಬುದ್ಧಯೂ ವೊಟು ದೂರ ವೋಗಿ ನಿಂತೋಗಿತ್ತು.
“ಇನ್ನೇನ ಮಾಡಾದು?- ಲಕ್ಕನ ಬುಂಡಮ್ಮಾರ ಅಟ್ಟೀಲೆ ಪುನಾ ಜೀತಕಿರುಸಿ, ಅಯಿವತ್ತು ರೂಪಾಯಿ ಈಸ್ಕಂಡು ಆ ಕೊರೆ ತೀರುಸಿಬುಡಾದು” ಅಂದಿದ್ದ ಅಯ್ಯ.
ಅವ್ವಂಗೆ ವಪ್ಪಿತ ಅಗ್ನಿಲ್ಲ ಆ ಮಾತು. “ತಿರುಗ ನನ್ನ ಮಗನ ಜೀತಕಿರುಸಕ್ಕೆ ವಪ್ಪಕ್ಕಿಲ್ಲ ನಾನು....” ಅಟಾನೆ ಮಾಡಿದ್ಲು!
“ಯಾರ ಮುಂದ್ಯಾ ನಿನ್ನಟ? –ಅಣದ ಯೆದುರ್ಗೆ ನಿಂತು ಗುದ್ದಾಡಕ್ಕೆ ಯಾವ ಬಡ್ಡೀ ಹೈದನಿಗೆ ಸಾದ್ಯ?... ಸುಮ್ಕೆ ಯಾಕ ಚಪಲ?- ನಾಳೆ ಸಂದೆಗೆ ಬುಂಡಮ್ಮಾರ್ನೆ ವೋಗಿ ಕ್ಯಾಳಿಬುಡಾದು”- ಅಯ್ಯ ಈ ಸಲ ಕೋಲ್ಟಿನಲ್ಲಿ ತೀರ್ಪು ಕ್ವಟ್ಟಂಗೆ ಯೋಳ್ದ...
ಆ ತೀರ್ಮಾನಕ್ಕೆ ನಮ್ಮ ಗುಡ್ಲೆಲ್ಲ ತಲೆಬಾಗಿ ವಪ್ಪಿಗಂಡಿತ್ತು...