138
ಮಾಡಬ್ಯಾಡ” ಅಂದಿದ್ರು...
ನನ್ನ ಗುಡ್ಲು ಕಡೀಕೆ ಎಜ್ಜೆ ಆಕ್ತ ನಂಗೊಂದೇ ಯೋಚ್ಣೆ:
“ಈ ಮಾರಾಯ್ರು ಯೇನೋ ಜೀತ ತಪ್ಪುಸಿದ್ರ. ಆದರೆ ನಾ ಇದ್ಯ ಕಲಿಯಾದು ಇನ್ನು ತಿಂಗಳಮಾವನಿಗೆ ಮದ್ವೆ ಆದಂಗೆ ಅಲ್ವ?
ನಾನು ನಮ್ಮ ಗುಡ್ಲ ತಲುಪಕ್ಕೂ ಆ ಕಡಿಂದ ಅಯ್ಯ, ಅವ್ವ ಏಡೂ ಆಳೂವೆ ಬರೋದಕ್ಕೂ ಒಂದೇ ಆಯ್ತು. ಏಡು ಅಳಿನ ಮೊಖವೊವೆ ಉಪ್ಪಾಕದ್ರೆ ಉಪ್ಪೊ ಬೇಯದೆ, ಇರೋವಸ್ಟು ಜೋಲು ಬಿದ್ದಿತ್ತು. ಮೊದ್ಲು ಉಸುರು ಕಡುಸಿ, ಮಾತ ತಗುದೋಳು ಅವ್ವ:
“ಬುಂಡಮ್ಮಾರ ಅತ್ರವೂ ಅಣ ದೊರೀನಿಲ್ಲ ಕನೊ... ಅವರೂವೆ ನಾವು ಕ್ವಟ್ಟ ನೂರು ರೂಪಾಯ ಯಾತಯಾತಕೊ ಬಳಸಿಬುಟ್ಟು, ಅದಿನೈದು ರೂಪಾಯಿ ಉಳುದದೆ, ಕೊಡಾನ ಅಂತ ಕ್ಯಾಳಿದ್ರು... ಅದು ತಕ್ಕಂಡು ನಾವ್ಯಾನ ಮಾಡಾದು ಬ್ಯಾಡಿ, ಅಂದೊ. ಬೋ ಪೆಚಾಡಿಕಂಡ್ರು...”
ಅಯ್ಯ ತನಗೆ ತಾನೆ ಮಾತಾಡ್ಕಳೊ ಅಂಗೆ ಅಂದ: “ಈಗ ಇನ್ಯಾರ್ನ ವೋಗಿ ಕೇಳಾದು?” ನಾನು ಕಯ್ಯ ಬಿಚ್ಚಿ ಅಣ ತೋರ್ತ. “ತಕ್ಕನ್ನಿ, ಕಿಸ್ಣಸಾಸ್ತ್ರಗೊಳು ಕ್ವಟ್ಟರು” – ಅವ್ವನ ಕಯ್ಯಿಗಿಟ್ಟು, ನಡುದ ಇಸ್ಯ ಯೋಳಿದೆ.
ಅವ್ವ, ಅಯ್ಯ ಏಡಾಳೂವೆ ಯೇನ ಇದರರ್ತ ಅನ್ನಾ ಅಂಗೆ ಮೊದ್ಲು ಮೊಖಮಾಡಿದೋರು, ನಾನು ಇವರಿಸಿದ್ದ ಕ್ಯಾಳಿ, ಬ್ಯಾಸರಪಟ್ಟರು. ಅವ್ವ ಅಂತೂವೆ-
“ಸರಿಕನ ಬುಡು, ಇನ್ನು ಮ್ಯಾಲೆ ಸಾಸ್ತ್ರಿಗೊಳ ಅಟ್ಟಿಯಾಗೆ ನಮ್ಮ ಹೈದನ ಜೀತ ಕಾಯಂ ಆದಂಗಯ್ತು” ಅಂದು ಅಣ ಎಣಿಸಕ್ಕೆ ಸುಮಾಡಿದ್ಲು.
“ಯೆಂಗೊ ಈ ಸವುಳದಲ್ಲಿ ಆ ಪುಣಾತ್ಮ ಬಂದು ಆತುಗಂಡರಲ್ಲ-“ ಅಂತ, ಕಡೀಕೆ ಅಯ್ಯ ಸಮಾಧಾನ ಮಾಡ್ಕಂಡ...
- * * *
ಲಕ್ಕ ತಮ್ಮ ಗುಡ್ಲಿನೊಳಗೆ ಮನಗಿದ್ದಂಗೆ, ಹಿಂದೆ ನಡೆದದ್ನೆಲ್ಲ ಮೆಲುಕಾಕಿದ್ದ. ಕಾಲ ಏಟು ಬ್ಯಾಗ ಬ್ಯಾಗ ಓಡೋಯ್ತದೆ ಅಂತ ಇಸ್ಮಯ ಪಡ್ತಿದ್ದ.
ಒಂದು ವರುಸ ಅನ್ನಾದು ಆಡಾಡ್ತ ಮುಗುದೋಗಿತ್ತು. ಅಯ್ಯ, ಗಡುವು ಮುಗುದು ಜೀತ ಕಳೀತಲೆ ಗುಡ್ಲಿಗೆ ವಾಪಾಸಾಗಿದ್ದ. ಆದ್ರೆ ನಮ್ಮ ಆಯಿವತ್ತು