154
ಲೋಟಿಗಳದಲ್ಲಿ ಅತ್ತಾರು ಗರಿಗಳ ಕಿತ್ತಿದ್ದ. ಅವ್ರಲ್ಲಿ ಮೂರು ಗರಿಗಳು ಮತ್ರ ಬಲಿತಿದ್ದೊ. ಉಳಿಕೆಯೋವೆಲ್ಲ ಎಳುಸು. ಅಂತಾ ಎಳುಸಿನ ಗರಿಗಳ ಕುಯ್ದದ್ಕೆ ಅವ್ವ ಚೀಮಾರಿ ಆಕಿದ್ಲು. ಆದ್ರೆ ಬೈದಲಲ್ಲಾಂತ ಲಕ್ಕ ಕ್ವರಗಿದ್ದು ಒಂದೇ ಗಳಿಗೆ, ಆ ಗಳಿಗೆ ಮುಗೀತು. ಲಕ್ಕನ ಕುಸಿ ಮುಗುಲ್ನೆ ಮುಟ್ಟಿತ್ತು. ಎಲ್ಲಾರು ಹ್ವರೆಗಳ ಕಟ್ಟಿ ಮುಗುದು, ಉಣ್ಣಕ್ಕೆ ಕುಂತಾಗ, ಲಕ್ಕನ ಮೊಖ ಜೋಲು ಬಿದ್ದಿತ್ತು. ಅನೂಕೂಲವಾಗಿದ್ದೊರು ರಾಗಿ ರೊಟ್ಟಿ, ನಂಜಕ್ಕೆ ಹುಳ್ಳಿ ಜಿಯಕ ತಂದಿದ್ರೆ, ಅವ್ವ ನೆಂಜಕ್ಕೆ ಬರೀ ಹಸಿಮೆಣಸಿನಕಾಯಿ ತರಾದ?...
ಅವ್ವ ಒಂದು ದಪ ಉಸಾರುದಪ್ಪಿದಾಗ, ಅಯ್ಯನ ಜ್ವತೇಲೂವೆ ಲಕ್ಕ ವೋಗಿದ್ದುಂಟು. ಆಗ ಅಯ್ಯ ಕರಕಂಡೋದ್ದು ದರಮನಳ್ಳಿ ಈಚಲುವನಕೇಯ!... ಈಚಲು ಗರಿಗಳ್ನೂ ಕಡಿದಾಯ್ತು. ಹ್ವರೇನೂ ಕಟ್ಟಾಯ್ತು. ಬುತ್ತೀನು ಉಂಡಾಯ್ತು. ವಂದಿಗುಟ್ಟೆ ಬಂದಿದ್ದ ಮಂದಿ ತಂತಮ್ಮಹ್ವರೆ ವೊತ್ತು ಊರುದಿಕ್ಕೆ ಕಾಲಾಕಿದ್ದೂ ಆಯ್ತು. ಗ್ರಾಸ್ತ ನಮ್ಮಯ್ಯ, ಉಳಿದೋರಂಗೆ ಜ್ವತ್ಗೇ ವೋಂಡಬಾರದ?- ಉಹ್ಹು. ಅವ್ನು ಕಾಲೆಳೆದದ್ದು ರಾಚನ ಎಂಡದಂಗಡಿಗೇಯ!...
ಲಕ್ಕ ರಾಚನ ಸೇಂದಿ ಅಂಗಡಿಗೆ ಕಾಲಿಟ್ಟದ್ದು ಅದೇ ಪ್ರತುಮ. ವಲ್ಲೆ ವಲ್ಲೇಂತ ಏಟೇ ಆಟ ಮಾಡಿದ್ರೂ ಅಯ್ಯ ಬುಡಬೇಕಲ್ಲ!... ಅಂಗಡಿ ಅಂದರೆ ಸುತ್ತಾಲು ಮಣ್ಣಿನ ಗ್ವಾಡ. ಅದುಕ್ಕೆ ಸುಣ್ಣ ತುಂಬದೆ. ಯಾವ ದ್ವಾಪುರದಾಗೆ ತುಂಬುದ್ದೊ ಆ ಸುಣ್ಣ!- ಈಗ ಬಿಳುಪು ಕಳದೋಗಿ ಯಾತಾವು ಮಾಸ್ಲು ಮಾಸ್ಲು. ಆ ಅಂಗಡಿ ಮ್ಯಾಗಡೆ ಕವುಚಿರಾದು ನಾಡೆಂಚು. ವಳೀಕೋದರೆ, ಇದ್ಕೆ ಗ್ವಾಡೆ ವತ್ತಿಗೆ ಎತ್ತಿರಿಸಿದ ಗದ್ದುಗೆ. ಗದ್ದುಗೆ ಸುತ್ತಾಲೂ ತುಂಡುಗ್ವಾಡೆ. ಆ ಗದ್ದುಗೆ ಮ್ಯಾಲೆ ನಟಕದ ದರ್ಬಾರ್ ಸೀನಿನಲ್ಲಿ ರಾಜನಂಗೆ ಸೋಕ್ಯಾಗಿ ಕುಂತಿರೋನೆ ಆ ಅಂಗಡಿ ಮಾಲೀಕ ರಾಚ!... ಅವನ ಹ್ವದೆ ಗಿರಲು ಮೀಸೆ, ಗುಡ್ಡಗಣ್ಣು, ಗುಜ್ಜಾನೆ ಮರಿಯಂಗಿರೊ ದೇಹ, ಇವ ಕಂಡು ಎಂತೋರ ಎದೆಯೂ ನಡುಗಬೇಕು!... ಅವುನ ಮುಂದೆ ಏಡು ಮರದ ತೊಟ್ಟಿ, ಮುವ್ವತ್ತು ನಲವತ್ತು ಸುರಬಿ ಎಂಡ ಇಡಿಸೊವು. ಈಚಲು ಮರದಿಂದ ಎಂಡ ಎಳುಸೋರ್ಗೆ ಒಂದೊಂದು ಸುಬ್ಬಿ ಎಂಡ ಕ್ವಡ್ತಾನಂತೆ ರಾಚ. ಎಂಡಾವ ವೊತ್ತು ತರಾರ್ಗೆ ಬ್ಯಾರೆ. ಅದ್ನೆಲ್ಲ ತಂದು ಮರದ ತೊಟ್ಟಿಗಳ್ಗೆ ತುಂಬುದ ಮ್ಯಾಲೇ ರಾಚ ಬಂದು ಗಲ್ಲ ಏರಿ ಕುಂತುಗಳಾದು!... ಅವುನ ಪಕ್ಕದಾಗೆ ವೋಟು ದೂರಕೆ ಕುಂತು ಚೋರ್ ಚೊರ್ ಅಂತ ಹುರಿ ಬಾಡು, ಚಾಪೀಸುಗಳ ದಾದೆಣ್ಣೇಲಿ ಕರೀತ ಕುಂತಿರೋಳು ಗಂಡ ಬುಟ್ಟ ಅವುನ ಅಕ್ಕನಂತೆ!... ಬೋದೆ ಮಯ್ಯಿನ ಎಂಗಸು.