180
ಇದ್ನಂತೆ. ವೋಟಲ್ಲಿ, ವಂದಿಗೇ ಬತ್ತಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮ ಅಂಗೂ ಅವರ ಗೆಣೆಕಾರ ಪಿಳಿಪ್ಪು ಇಬ್ಬರೂವೆ ಅವ್ನು ಬಿದ್ದೋಗದಂಗೆ ತಬ್ಬಿ ಇಡಿದು ಎಂಗೆಂಗೂ ಮೆತ್ತಮೆತ್ತಗೆ ನಡುಸಿಗುತ್ತ ಉಪಾಯ್ವಾಗಿ ಕಿರಿಸ್ತಾನ ದೊಡ್ಡಿಗೆ ಅವ್ನ ತಟಾಯಿಸಿ, ಸುಸಾನಮ್ನ ಅಂಗಡಿ ಮನ್ಗೆ ಕೂಡಿದ್ರಂತೆ!
ಆ ಸೂಸನಮ್ನ ಅಂಗಡಿ ಮನೇಲಿ ಪುರಾ ನಾತ್ರೆ ಕ್ವಂಟಾಗಿ ಬಿದ್ದಿದ್ದ ನಮ್ಮಣ್ಣ ಪುಟ್ಟಾರಿಗೆ ಬೆಳುಕು ಅರೀತ್ಲೆ ಎಚ್ಚರಾದಾಗ ತನ್ನೆದುರ್ಗೆ ಕೆಪ್ಪಟೆ ಕೆಂಪು ಲಂಗ ಉಟ್ಟು, ತೆಳ್ಗೆ ಬೆಳ್ಗೆ ಸುಳುದಾಡ್ತಿದ್ದ ಸುಸಾನಮ್ಮ ಅರೇದೆಣ್ಣು ಲೂಸಿ ಅನ್ನಾಳ ಕಂಡ ಬೆರುಗಾದ್ನಂತೆ!... ಅವನೆದ್ದದ್ದ ಗಮನ್ಸಿ ತಟಕ್ನೆ ಓಡೋಗಿ ಟೀ ಕಾಯ್ಸಿ ಗಾಜಿನ ಗಳಾಸ್ನಲ್ಲಿ ತಂದು ಕ್ವಟ್ಲಂತೆ ಲೂಸಿ!... “ನೀ ಯಾರು?” ಪುಟ್ಟಾರಣ್ಣ ಉಸುರ್ತಿದ್ದಂಗೇಯ, ಇಂದುಗಡೀಂದ ಬಂದ ಸೂಸಾನಮ್ಮ, “ಯಾಕಪ್ಪ, ಇವುಳು-ನನ್ನ ಮಗಳು, ಲೂಸಿ” ಅಂದ್ಲಂತೆ. ಸರಿ, ಅಂದು-ಮೊಖ ತ್ವಳಕಂಡು, ಲೂಸಿ ಕ್ವಟ್ಟ ಟೀ ಹೀರಿ, ಪುಟ್ಟಾರಿ-
“ಅಪ್ಪೊಯ್, ನಾತ್ರೆ ಪುರಾ ನಿಮ್ಮ ಗುಡ್ಲಲ್ಲೆ ಮನಗಿಬುಟ್ಟಿದ್ನ್ಯಾ? ಸರಿಕವ್ವ ನಾತ್ರೆ ಯೆಲ್ಲೋಗಿದ್ದೆ ಅಂದ್ರೆ, ನಮ್ಮಯ್ಯಂಗೆ ಯಾನಂತ ಜಬಾಬು ಕ್ವಡ್ಲಿ?”- ಪೇಚಾಡದ್ನಂತೆ – ಅದುಕೆ,
“ಅದ್ಯಾಕಪ್ಪ ವೊಸ್ಟು ಪೇಚಾಡೀ? –ಯೇನಾರ ಒಂದು ಸುಳ್ಳು ಜೋಡುಸುದ್ರಾಯ್ತು” ಅನ್ನಾದ ಸೂಸಾನಮ್ಮ?
ನಮ್ಮ ಪುಟಾರಣ್ಣ ಫಟ್ ಅಂತ ಯೋಳಿದ್ನಂತೆ:
“ಸುಳ್ಳು ತಪವಟ ನನ್ನ ಜಲ್ಮದಾಗೆ ಬರನಿಲ್ಲ. ನಡದುದ್ದು ನಡದಂಗೆ ಯೋಳ್ತೀನಿ, ಅಯ್ಯನ ಕುಟ್ಟೆ... ಮಾಡಿದ ತೆಪ್ಪಗೆ ಅಯ್ಯ ಬಯ್ಯಿದ್ರೆ ಬಯ್ಯಿಸ್ಕತ್ತೀನಿ.”
ಅಂಗೇನೆ ಆಯ್ತು. ಅಣ್ಣ ಯೋಳಿದ್ದ ಕ್ಯಾಳಿ ದೊಡ್ಡಯ್ಯ ರಾಂಗ್ ರಾಂಗ್ ಆದ.
“ನೀ ಕುಡೀತಾನೇಂತ ನಂಗೂ ಬಂದಿತ್ತು ಕನ್ಲ. ನಾ ನಂಬ್ನಿಲ್ಲ. ಈಗ ನೀನೇಯ ರುಜ್ವಾತು ಮಾಡಿ ಯೋಳ್ತಿರ್ವಾಗ ಇನ್ನೇನ ಉಳಿದಿರಾದು?... ನೀನು ಚಿಕ್ಕೋನು ಪುಟ್ಟೋನು ಆಗಿದ್ರೆ, ದಡಿ ತಕ್ಕಂಡು ಚಮಡ ಸುಲೀತಿದ್ದೆ. ಈಗ ದಾನ ಧಡಿಯ ಆಗಿ ಬೆಳುದು ನಿಂತಿದ್ದೀ. ಈಗ ನಿಂಗೇನು ಯೋಳೊ ಅಂಗಿದ್ದದ್ದು?- ನನ್ನತ್ರ ಒಂದೇ ಮಾತು: ಪುನಾ ಈ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನದ ಲೌಡಿ ತಾವಿಕ ಯೇನಾರ ಹ್ವಾದೆ, ಆಮ್ಯಾಕೆ ನನ್ನ ಗುಡ್ಲಿಗೆ ಮಾತ್ರ ನೀ ಕಾಲ ಆಕಬಾರ್ದು. ಈ ಮಾತು ಗಟ್ಟಿ-ತಿಳುಕೊ...”