ವಿಷಯಕ್ಕೆ ಹೋಗು

ಪುಟ:Vyshakha.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216

“ಅದ್ಯಾಕೆ ಅಮ್ಮಾರೆ, ನಿಮ್ಮ ಗಾಡಿಗೇನಾಗದೆ?” ಕೇಳಿದ

“ನಮ್ಮ ಗಾಡಿ ದೂರಿ ಮುರಿದುಹೋಗಿದೆ. ಅದನ್ನ ರಿಪೇರಿಗೆ ಬಿಟ್ಟಿದೀವಿ. ಅದಕ್ಕೇನೆ ನೀನು ಇಲ್ಲೆ ಇದ್ದು ನಮಗೆ ಕೊಂಚ ಸಹಾಯ ಮಾಡು ಅಂತ ಕೇಳ್ತಿರೋದು...”

“ಇಲ್ಲ, ಇಲ್ಲ, ನಾ ವೋಗಲೇಬೇಕು... ನಮ್ಮ ಗಾಡ್ಯ ಬೇಕಾರೆ ನೀವು ಇಲ್ಲೆ ಇಟ್ಟುಗನ್ನಿ. ಗಾಡಿ ವೋಡಿಯಕ್ಕೆ ಯೆಂಗಿದ್ರೂ ನಿಮ್ಮಾಳು ಚೊರಕ ಇದ್ದೇ ಅವನೆ... ನಾ ವೋಗಿ ಅಯ್ಯಾರ್ಗೆ ಇಸ್ಯ ತಿಳುಸ್ತೀನಿ.”

“ಹುಂ, ಇನ್ನೇನು ಮಾಡುವುದು. ನಿಮ್ಮ ತಂದೆಗೆ ಹುಶಾರಿಲ್ಲ ಎನ್ನುವಾಗ, ನಾವು ಹೇಗೆತಾನೆ ನಿನ್ನನ್ನ ತಡೆಯಲಿಕ್ಕೆ ಆಗುತ್ತೆ. ನಿಮ್ಮ ಗಾಡಿಯನ್ನು ಇನ್ನು ನಾಲ್ಕೈದು ದಿನಗಳಲ್ಲಿ ಕಳಿಸಿಕೊಡ್ತಾರಂತೆ ಎಂದು ಮಾವಯ್ಯನವರಿಗೆ ತಿಳಿಸು... ಆದೇನೋ ಸರಿ. ಆದರೆ ನೀನು ದೂರ ಪ್ರಯಾಣ ಮಾಡಿ ಬಂದಿದ್ದೀಯೆ, ಮತ್ತೆ ಹಸಿದು ನೀನು ನಡೆದು ಹೋಗಲಿಕ್ಕೆ ನಾನೆಂದೂ ಒಪ್ಪಲ್ಲ. ಹೊಟ್ಟೆಗೆ ನೀನು ಏನಾದರೂ ತಗೊಂಡೇ ಇಲ್ಲಿಂದ ಹೊರಡಬೇಕು.”- ಪಾರ್ವತಿ ಒತ್ತಾಯ ಪಡಿಸಿದಳು.

ವಿಧಿಯಿಲ್ಲದೆ ಒಪ್ಪಿ, ಲಕ್ಕ ಎತ್ತುಗಳನ್ನಟ್ಟಿ, ಅವರ ಮನೆಯ ಹಿಂದಿನ ಹಿತ್ತಲಿಗೆ ಹೊರಟ. ಅವನು ತೆರಳುವುದನ್ನೇ ವೀಕ್ಷಿಸುತ್ತಿದ್ದ ಪಾರ್ವತಿ,

“ನಿಮ ಲಕ್ಕನ್ನ ನೋಡಲಿಕ್ಕೇ ಒಂದು ಸಂತೋಷ ಆಗುತ್ತೆ ನೋಡೆ ನಕ್ಕು... ನಮ್ಮರೈತರು ಹೇಳ್ತಾರಲ್ಲ-ಕೊರಡ ಬಿಗಿದ ಹಂಗೆ ಬೆಳದವ್ನೆ ಅಂತ -ಹಾಗೆ ಬೆಳೆದಿದ್ದಾನೆ, ಹುಡುಗ!... ನಮ್ಮ ಚೋರಕನೂ ಇದ್ದಾನೆ ನೋಡು. ನಾವು ಎಷ್ಟೆಷ್ಟೇ ಪೋಷಾಕು ಮಾಡಿದರೂ ಅವನು ಮಾತ್ರ ಸೀಕಲ್ಲ ಕೊತ್ತೀನೆ!” ಎನ್ನುತ್ತ ನಕ್ಕಳು.

ರುಕ್ಮಿಣಿ ಮಾತು ತಿರುಗಿಸಿ,

“ಇದೇನಕ್ಕ, ನಮ್ಮ ಸರಸಿ, ಗಿರಜಿ ಇಬ್ಬರೂ ಕಾಣ್ತಾನೆ ಇಲ್ಲ?” ಎಂದು ಕೇಳಿದಳು.

“ಅಯ್ಯೊ, ಅವರಿಬ್ಬರನ್ನೂ ಸಾದಾ ದಿನಗಳಲ್ಲೇ ಹಿಡಿಯುವುದು ಪ್ರಯಾಸ. ಇನ್ನು ಇಂಥ ಸಂಭ್ರಮದ ದಿನದಲ್ಲಿ ಕೇಳಬೇಕೆ?... ಒಳಗಡೆ ಎಲ್ಲೊ ಸುತ್ತಾಡ್ತ ಇರಬೇಕು. ಬಾ, ನೋಡೋಣ” ಎನ್ನುತ್ತ ಪಾರ್ವತಿ ಕೈ ಹಿಡಿದು ಎಳೆದಾಗ, ರುಕ್ಮಿಣಿಯ-

“ಅಕ್ಕ, ನಾನು ಸ್ನಾನ ಮಾಡಬೇಕಲ್ಲ...” ಎಂದು ತಡವರಿಸಿದಳು.