221 ನಾವೆಲ್ಲಾರು ನ್ವಾಡ ನ್ವಾಡ್ತಿದ್ದಂಗೇಯ ಒಂದು ರಣದ್ದು ಸುಮಾರು ಒಂದು ಮುಕ್ಕಾಲು ಮಾರಿನೋಟು ಉದ್ದದ ತನ್ನ ರೆಕ್ಕೆಗಳ್ನ ಕೆದರಿ, ಸಟ್ಟನೆ ಆ ಕುಂತಿದ್ದ ಎಂಗಸಿನ ಮ್ಯಲೆ ಎರಗ್ತು. ಆ ಕ್ಸಣಕೆ ಆ ಎಂಗಸಿನ ದೇಯ ವಕ್ಕಡೀಕೆ ಮುಂಟಿಗಂತು!... ಆದ ಕಂಡು ನಮಗೆಲ್ಲ ದೊಡ್ಡೋನಾಗಿದ್ದ ಹೈದ ಉಸುರ್ದ- “ ಆ ಎಂಗಸು ನಿದ್ದೆ ಮಾಡ್ತ ಇಲ್ಲ ಕನರ್ಲ- ಅವಳು ಸತ್ತೋಗವಳೆ!... ಅದು ಅವಳ ಹೆಣ- ಇಲ್ಲದಿದ್ರೆ ಈ ಪಾಟಿ ಸದ್ದುಗದ್ದಲದಲ್ಲಿ ಅವಳು ಎಚ್ಚಾರಾಗ್ದೆ ಇರ್ತಿದ್ಲ?... ಆಲ್ಲದೇಯ ಆ ರಣದ್ದು ಅಂಗೆ ಮ್ಯಾಲೆ ಎಗರಿ ಬಿದ್ದರೂವೆ ಚಿಂಕರಾನು ಚೀರದೆ ಅಂಗೆ ಯಾರಾರು ಸುಮ್ಕೆ ಮಂಟಿಗಂಡಾರ?...”
ಒಂದು ರಣದ್ದು ಎಗರಿ ಬಿದ್ದು ಅವಳ ಎದೆ ಗುಂಡಿಗ್ಯ ಕುಕ್ಕಿ ವೋಟು ಮಾಂವುಸವ ಆ ಗುಡಿಂಗ್ಯಿಂದ ಕಿತ್ತ ಕ್ಸಣಕೆ, ಅವಳ ಸುತ್ತಾಲು ಕುಂತಿದ್ದ ಎಲ್ಲಾ ರಣದ್ದುಗಳೂವೆ ನಾ ಮುಂದೆ ತಾ ಮುಂದು ಅನ್ನೋವಂಗೆ ಗರಿಕೆದರಿ ಆ ಎಂಗಸಿನ ಹೆಣದ ಮ್ಯಾಲೆ ಎಗರಿ ಬಿದ್ದೊ. ಸಿಕ್ಕಸಿಕ್ಕದೋಟು ಮಾಂವುಸವ ಕಿತ್ತೊ. ಜಾಗ ಸಿಕ್ಕದೇ ವೋದಾಗ, ಕೀ ಕೀ ಕೀ ಅಂತ ಕೀರ ಕೀರ್ಲಾಗಿ ಕಿರುಚ್ತ ಒಂದಕ್ಕೊಂದು ಕಡಿದಾಡಿ ಮಡಿದ ಬೀಳ್ತಾ ಇದ್ದೊ...
ಇದ ಕಂಡು ನಮಗೆ ಇನ್ನು ಅಲ್ಲಿ ನಿಂತು ನ್ವಾಡ್ತಿರಕ್ಕಾಗನಿಲ್ಲ. ನಾವೆಲ್ಲಾರೂ ದನ ಅಟ್ಟಿಕಂಡು ಬಿದ್ದಂಬೀಳ ಒಂದೇ ಉಸುರ್ಗೆ ವಟ ಹ್ವಡದೊ.
ಅವತ್ತು ನಾತ್ರೆಗೆ ಆ ದೊಡ್ಡ ಹೈದ ವಿನಾಯ್ಸಿ, ನಾನೂ ಸೇರಿದಂಗೆ ಐದು ಹೈಕಳಿಗೂ ಬೆಂಕಿ ಕಾದಮಗೆ ಜರ ಕಾಯ್ತು. ಎಂಟತ್ತು ಜಿನ ಬುಡನೇ ಇಲ್ಲ. ನಾವು ಹೈಕಳೆಲ್ಲ ಹೆಣಾವ ಆ ಪರಿಪಟ್ಲಲ್ಲಿ ಕಂಡು ಕಂಗಾಲಾಗಿದ್ದೊ. ನಾನಂತೂ ಹೆಣಾವ ಪೋಟು ಸಮೀಪ, ಅದೂ ಆ ಪರೀಲಿ ನ್ವಾಡಿದ್ದು- ಇದೇ ಮೊದಲ್ನೆ ಸಲ!... ಜರದ ತಾಪದಲ್ಲಿ ನನ್ನ ಗ್ಯಾನ ಯಾತಾವು ಯಾತಾವೊ ಸುಳುದಾಡ್ತ ಇತ್ತು... ನಾನೊಂದು ಮರದ ಬೊಡ್ಡೆಗೆ ಅಂತು ಕುಂತಿರೋವಂಗೆ, ಸುತ್ತಾಲು ಗುಂಡಗೆ ಸದ್ದಿಲ್ದೆ ತೆಪ್ಪಗೆ ಕುಂತಿದ್ದ ಆ ರಣದ್ದುಗಳು ವಸಿವಸ್ಯಾಗಿ ಕುಪ್ಪುತಾ ಕುಪ್ಪುತ ಬಂದು, ಕಡೀಕೆ ಅವೆಲ್ಲಾ ಒಟ್ಟೊಟ್ಟಿಗೆ ತಮ್ಮ ರೆಕ್ಕೆಗಳ ವೋಟೋಟು ಅಗಲಕೂ ಕೆದರಿ, ಗಕ್ಕನೆ ಮ್ಯಲೆರಗಿ, ನನ್ನ ಸರೀರದ ಮಾಂವುಸವ ಕುಕ್ಕಿ ಕುಕ್ಕಿ ತಿಂತಾ ಇದ್ದಂಗೆ ಕಂಡು ಕಿಟಾರ್ನೆ ಕಿರುಚ್ದೆ!... ಅವ್ವ ಎದ್ದು, “ಯೇನಾಯಿತ್ಲ ಮೊಗಾ?... ನಾ ಇಲ್ಲೇ ಇವ್ನಿ. ಎದುರಿಕೊಬ್ಯಾಡ ಮನಕ್ಕೊ” ಅಂತ ತಬ್ಬಿ ಕಂಡು ಮೈದಡವಿದ್ಲು...
- * * *