242 ಯಜಮಾನರೆಲ್ಲರಿಗೂ ಜಾಪಾಳದ ಮಾತ್ರೆ ಕೊಟ್ಟ.
ಈ ಮಾತು ಕೇಳಿ, ಅಲ್ಲಿ ನೆರೆದ ಎಲ್ಲ ಯಜಮಾನರಿಗೂ ಬಾಯಿ ಒಣಗುತ್ತ ಬಂದಿತು. ಅವರೆಲ್ಲರೂ ಒಂದು ಕಡೆ ಪ್ರತ್ಯೇಕವಾಗಿ ಸೇರಿ ಪರಸ್ಪರ ವಿಚಾರ ವಿನಿಯಮಯ ಮಾಡಿಕೊಳ್ಳುತ್ತಿದ್ದರು.
ಲಕ್ಕನಿಗೆ ಮುಸ್ಟಾನ್ನ ಉಂಡಸ್ಟು ಸಂತೋಸ ಆಗಿತ್ತು... ಈ ಯಜಮಾನ್ರು ನಮ್ಮೂರ್ನಲ್ಲಿ ‘ಮಾತುಭಾರಿ’ ಮನುಸು ಅಂತ ಎಲ್ಲಾರ ಬಾಯ್ನಲ್ಲೂವೆ ಉಳ್ಳಾಡ್ತಾರೆ!- ಇಂತೋರ ಈವಯ್ಯ ಎಂತೆಂತ ಪೈಲ್ವಾನ್ ವರಸೆ ಆಕಿ ಬೆಪ್ಪುಗೂಡಿಬುಟ್ಟ!- ಹೀಗೆಂದು ಆ ಇನ್ಸ್ಪೆಕ್ಟರ್ ವಿಷಯವಾಗಿ ಲಕ್ಕನಿಗೆ ಬಹಳ ಹೆಮ್ಮೆಯೆನಿಸಿತು. ಮಂಕು ಬಡಿದವರ ಹಾಗೆ ಇನ್ನೂ ಜಗಲಿ ಮುಂದುಗಡೆಯೇ ನಿಂತಿದ್ದ ಶ್ಯಾನುಭೋಗ ಸೀತಾರಾಮ್ಯನವರನ್ನು ಕೇಳಿದ:
“ಸೋಮಿ, ಇವರು ಯಾವ ಜಾತಿ?” ಶ್ಯಾನುಭೋಗರು ಪಿಸುಮಾತಿನಲ್ಲೆ ಖಾರ ತುಂಬಿ,
“ಅಯ್ಯೊ, ನಿಮ್ಮ ಜಾತಿಗೂ ಕೀಳು ಕಣೊ-ಎಡಗೈ!”- ಎಂದರು ತಿರಸ್ಕಾರವಾಗಿ. ಅವರಿಗೆ, ಬುದ್ಧಿವಂತ ಬ್ರಾಹ್ಮಣನಾದ ತಾನು ಈ ಅತ್ಯಂತ ಕೀಳು ಜಾತಿಯ ಯಃಕಶ್ಚಿತನಿಂದ ಈ ದಿನ ಊರಿನ ಪ್ರಮುಖರ ಮುಂದೆ, ಅದೂ ನಡುಬೀದಿಯಲ್ಲಿ, ಮಾತುಮಾತಿಗೂ ‘ಚಿತ್’ ಅದೆನಲ್ಲ? ಎಂಬ ಕೊರಗು ಒಳಗೊಳಗೆ ಜ್ವಾಲಾಮುಖಿಯಾಗಿ ಹೊಗೆಯಾಡುತ್ತಿತ್ತು.
ಲಕ್ಕನಿಗೆ ಇನ್ಸ್ಪೆಕ್ಟರ್ ಗೂಳಪ್ಪನ ಬಗ್ಗೆ ಇನ್ನೂ ತಾರೀಪು ಹೆಚ್ಚಿತು. ನಮ್ಮೊನೊಬ್ಬ ಅದೇಟು ಚೆಂದಾಗಿ ನ್ಯಾಯ ಅಡ್ಡ!... ಈ ಸಾಸ್ತ್ರಪುರಾಣ ಓದ್ದ ನಮ್ಮೂರ ಗಟಾನುಗಟಿಗಳ ಅದೇಟು ಸಲೀಸಾಗಿ ಮಾತ್ನಲ್ಲಿ ಸೊಲಿಸಿದ್ದ!... ಬೇಸ್, ಬೇಸ್- ಲಕ್ಕನಿಗೆ ಎದೆಯುಬ್ಬಿ ಬಂತು. ಅವರನ್ನು ಮಾತಾಡಿಸಲೇಬೇಕೆಂದು ಮನಸ್ಸಾಯಿತು. ಮೋಟಾರ್ ಸೈಕಲ್ ಹಿಡಿದು ಏರಲು ಸಿದ್ದನಾಗಿ ನಿಂತಿದ್ದ ಗೂಳಪ್ಪನ ಮುಂದೆ ಹೋಗಿ ಕೈ ಜೋಡಿಸಿ ನಿಂತ “ಕೈಮುಗುದೆ. ಸೋಮಿ-“ ಎಂದ ಅತ್ಯಂತ ವಿನಯದಿಂದ.
“ಇವನು ಯಾರು?” - ಸಬ್ಇನ್ಸ್ಪೆಕ್ಟರ್ ಗೂಳಪ್ಪ ನಿರ್ಭಾವದಿಂದ ಕೇಳಿದರು. ಅಷ್ಟರ ಮಾತು ಮುಗಿಸಿ ಇತರ ಯಜಮಾನರ ಜೋತೆಯಲ್ಲಿ ಅಲ್ಲಿಗೆ ಬಂದಿದ ನಂಜೇಗೌಡ,
“ಇವನು-ಹೊಲೇರ ಲಕ್ಕ. ಇವರ ದೊಡ್ಡಪ್ಪನೆ ನಮ್ಮೂರ ಕುಳವಾಡಿ. ಅವನ್ಗೆ ಹುಸಾರು ತೆಪ್ಪಿ, ಅವ್ನ ಬದ್ಲಾಗಿ ಇವನ್ನ ಕಳುಸವ್ನೆ” ಎಂದು ಪರಿಚಯಿಸಿದ.