ಸಮಗ್ರ ಕಾದಂಬರಿಗಳು
೨೬೭
ಪಾದವ ನೆಕ್ತಾ ಇತ್ತು. ತನ್ನ ಈಟು ತೀವ್ರಾಗಿ ಬಾದಿಸ್ತಿದ್ದ ಚಿಂತ್ಯ ಮರೆಯಕ್ಕೆ ಲಕ್ಕನ ವ್ಯಗ್ರಾದ ಮನಸು ಬ್ಯಾರೊಂದು ದಿಕ್ಕಿನಾಗೆ ಅರೀತು...
ಊರ್ನ ಉತ್ತಮರೆಲ್ಲ ನ್ಯಾಯ ಮಾಡಿ ನಂಗೆ ಯಾವ ಸಿಕ್ಸೆ ಕ್ವಡ್ತಾರೊ?... ರುಕ್ಮಿಣವ್ವಂಗೆ ಆ ಹಾರುವರೆಲ್ಲಾರು ಪಂಚಾತಿ ಮಾಡಿ ಅದೇನು ಫಜೀತಿ ಮಾಡ್ತಾರೋ?... ದ್ಯಾವರು ಅದ್ಯಾಕೆ ಅವರ್ಗೆ ಆ ಬುದ್ದ ಕ್ವಟ್ಟ?... ನಮ್ಮವ್ವನೂ ಸಿವುನಿಯೂವೆ ಚಾಪೆ ಹೆಣೆಯಕ್ಕೆ ಬರದೆ ಗುಡ್ಲಾಗೆ ಬಿದ್ಕಂಡು ಸೋಕ ಮಾಡ್ತಿರಬೈದು!... ರಾಚನ ಸರಾಪಿನ ಅಂಗಡೀಲಿ ನಮ್ಮಯ್ಯ ತನ್ನ ಯತೆ ಮರೆಯಕ್ಕೆ ಇನ್ನೂ ಏಡು ಬುಂಡೆ ಜಾಸ್ತಿ ಕುಡುದು ಆಳ್ತಾ ಬಿದ್ದಿರಬೈದು!... ಮಠದ ಸಿವಪಾದಪ್ಪನೋರು ತಮ್ಮ ಭಕ್ತರ್ನ ಕುಂಡರಿಸಿಕಂಡು ಸರಣರ ಇಚಾರಾಗಿ ಉಪದೇಸ ಮಾಡ್ತಿದ್ದದ್ದು ಮಠದ ಬೀದೀಲಿ ಬಂದಾಗ ನಂಗೇ ಕಾಣಿಸ್ತಲ್ಲ! – ಆದ್ರೆ, ಅಲ್ಲಿ ನಂಜೇಗೌಡರೆ ಕಾಣ್ನಿಲ್ಲ. ಸೊತಕ ಅಂತ ತಮ್ಮ ಅಟ್ಟೀಲೇ ಇರಬೈದು... ಕುಂಬಾರಗೇರೀಲಿ ತಾನು ಬತ್ತಾ ಇರಬೇಕಾರೆ, ಅಲ್ಲಿ ಮಾರಾಮಾರಿ ಕದ್ನ ಹಕ್ಕಳ ಮಾತ್ಗೆ ಸುರು ಆದ್ದು. ಗೆಜ್ಜುಗ ಆಡುವಾಗ ಮಾದಸೆಟ್ಟಿ ಹೈದ, ಗುಜ್ಜಸೆಟ್ಟಿ ಹೈದ್ನ ನೂಕುದನಂತೆ. ಬಿದ್ದು ಅದರ ಮಂಡಿ ಮೊಣಕಯ್ಲೆಲ್ಲ ರಕ್ತ ಬಸೀತಂತೆ. ಅವೇಡು ಹಕ್ಕಳ ಅವ್ವದೀರು ಮುಂದಲೆ ಇಡುಕಂಡು ಜಗ್ಗಾಡಿದ್ರಂತೆ. ಆಮ್ಯಾಕೆ ಅವರಿಬ್ರ ಗಂಡದೀರೂ ಮೆಚ್ಚು ಕುಯ್ಯಗತ್ತಿ ಕತ್ಕಂಡು ರಣರಂಗ ಮಾಡಿ ನಿಂತಿದ್ದದ್ದ, ತಾನೂ ವಕ್ಕಡೀಕೆ ನ್ವಾಡ್ತಿದ್ದ. ಈ ಜಗಳ ಬುಡುಸಿ ಸಮಾದಾನ್ಕೆ ತರಬೇಕಾರೆ ಕುಂಬಾರಗೇರಿ ಯಜಮಾನ್ರಿಗೆ ತುಟಿಗಟ್ಟಾಯ್ತು...
ಲಕ್ಕನ ಯೋಚ್ಣೆ ಇಂಗೆ ಅರೀತ ಇರ್ವಾಗ, ದ್ಯಾವಾಜಿ ಯಾವುದೊ ಮಾತಾಡ್ತ ಆಡ್ತ,
“ಈ ಊರ್ನ ಆದ್ಯಾವ ನಕ್ಸತ್ರದಾಗೆ ಉಟ್ಟಾಕಿದ್ರೊ ಹಿಂದನೂರು!... ಅವ್ವಿ, ಅವ್ವಿ, ಅವ್ವಿ, ಒಂದು ಜಿನ ಆದ್ರೂವೆ ತಪ್ಪದೇ ಇಲ್ಲ, ಈ ಊರ್ನಲ್ಲಿ!... ಇವೊತ್ತು ಈ ಕೇರೀಲಿ ಆದ್ರೆ, ನಾಳೀಕೆ ಇನ್ನೊಮದು ಕೇರೀಗೆ ಸುತ್ತುಗತ್ತದೆ! ಯಾರೂವೆ ನಿರುಂಬಳಾಗಿ ಇರುವಂಗೇ ಇಲ್ಲ. ನೆರೆ ಕೆಟ್ಟರೆ ಕರ ಕಟ್ತಿವಿ ಅನ್ನೊ ಜನವೆ ಊರು ತುಂಬ!- ಇಂಗಿರ್ವಾಗ ನಿರುಂಬಳಾಗಿ ಇರಾದಾದ್ರು ಎಂಗೆ?...”- ದೊಡ್ಡ ಲಾಯರಿ ತರಾನೆ ಉಡಾಯಿಸಿದ್ಲು ವಾದ್ವ!
“ನೀ ಯೋಳೋದೆ ಸೈ” ಅಂದ ಎಂಗಸ್ರ ಕಯ್ಲಿ, ಈಚಲು ಗರಿ ಎಸುಳ ಒಂದರೊಳ್ಗೆ ನುಗ್ಗಿ ಇನ್ನೊಂದರೊಳ್ಗೆ ಎದ್ದು ಕಾಲು, ಅರ್ದ, ಮುಕ್ಕಾಲು- ಇಂಗೆ ಚಾಪೆ ಆಯ್ತಾ ಇದ್ದೊ.