ವಿಷಯಕ್ಕೆ ಹೋಗು

ಪುಟ:Vyshakha.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

೨೮೯

ಅಡವಿಯಪ್ಪನ್ನ ಕಂಡರೆ ಊರ್ನಲ್ಲಿ ಯಾರ್ಗೂ ಆಯ್ತಾ ಇರನಿಲ್ಲ. ಅವ್ನು ಸಣ್ಣಪುಟ್ದಕ್ಕೆ ಆಸೆ ಪಡ್ತಿದ್ದಲ್ಲದೆ, ಊರ್ನಲ್ಲಿ ಯಾರ ಕುಟ್ಟೂ ಸೇರ್ತಿರನಿಲ್ಲ. ತಾನಾಯ್ತು, ತನ್ನಹೊಲ ಮನೆ ಆಯ್ತು. ಊರ್ನಲ್ಲಿ ಆಯ್ತಿದ್ದ ಪಂಚಾತಿ ನ್ಯಾಯ ನ್ವಾಡಿ ನ್ವಾಡಿ ಅವನ್ಗೆ ಪಂಚಾತಿ ಆಂದ್ರೆ ಬೆಚ್ಚಿ ಬೀಳೋನು. ಏನಾರ ತನ್ನ ಹ್ವಟ್ಟೇಲಿ ಮಡಕ್ಕಳಕ್ಕೆ ಆಗದೆ ಇರೊ ಇಸ್ಯ ಇದ್ದರೆ, ಅದ್ನ ತನ್ನ ಹ್ವಟ್ಟೆ ಉಬ್ಬರ ಕಳಕಳಕ್ಕೆ ಲಕ್ಕನೊಬ್ಬನ ಆತ್ರ ಬಾಯಿ ಸಿಡಿಲಿಸೋನು!.. ಆದಕೇನೆ ಆವತ್ತು ನಡದ ಜಗಳದ ಇಸ್ಯವ ಆಮ್ಯಾಕೆ ಮಾತಾಡ್ತ ಅಂದಿದ್ದ- “ಗಂಗಿಗೆ ಅವತ್ತು ಜಬಾಬು ಕ್ವಡ್ತ ದರುಮರಾಯನ ಮರಿಮಗನಂಗೆ ಮಾತಾಡಿದ್ದೆ ಕನ್ಲ” ಅಂತ ನಕ್ಕಿದ್ದ.

ಆದ್ರೆ ಗಂಗೆ ವೋಟಕೆ ಸುಮ್ಮ ಕಾಗನಿಲ್ಲವಂತೆ, ಅವಳು-

“ಇದೀಗ ಚೆಂದ. ನಾನು ಕಣ್ಣ ಕಿಸುಗಂಡು ಚೆಂದಾಗಿ ನ್ವಾಡಿದ್ನೆ ಇಲ್ಲಾಂತ ಮಲೆಯಾಳಿ ಕಣ್ಣುಕಟ್ಟು ಮಾಯ ಮಾಡಕ್ಕೆ ವೋಂಟಿದ್ದೀಯಲ್ಲ, ನೀನೀಗ ಐನಾತಿ ಭಂಡ... ಇನ್ನು ನಿನ್ನ ತಾವು ಎಚ್ಚು ಮಾತಾಡಿ ಸುಕವೇನ?... ಕ್ಯಾಳು. ಇನ್ನೊಂದು ಜಿನ ಏನಾರ ಇಂಗೆ ನನ್ನ ಚೋಗಿ ತೊಪ್ಯ ನೀ ಕದೀತ ಸಿಕ್ಕಾಕಂಡ್ರೆ ನಾ ಮಾತ್ರ ಸುಮ್ಮಕಿರೋಳಲ್ಲ...” ಅಂದೇಬುಟ್ಲಂಟೆ!

“ಅದೇನು ಮಾಡಿಬುಟ್ಟೇಣೆ?” - ನೆವುರಿದ್ನಂತೆ ಅಡವಿ.

“ಏನು ಮಾಡಬುಟ್ಟೀ ಅಂದ್ರೆ, ಮಾಡಾದ್ನೆ ಮಾಡ್ತೀವಿ” ಅಂತ ಗಂಗಿ ಸಿಡುಕಿದ್ಲಂತೆ.

“ ‘ಅದೇನು ವಸೀತಿಯೋ ವಸಿ’ ಅಂತೇಳಿ ಕಣ್ಣ ಮೆಡುರುಸಿ ವಳೀಕೆ ನಡುದೆ ಕನ್ಲ, ಲಕ್ಕ”- ಅಡವಿ ಲಕ್ಕನ ಕುಟ್ಟೆ ಇವರಿಸಿದ್ದ.

ಮುಂದಿನ ದಿನಗಳಲ್ಲಿ ಈ ಆಣಾಣಿ ನಿಲ್ಲನೇ ಇಲ್ಲ. ಅಡವಿಯಪ್ಪ ತೊಪ್ಪೆ ಬಾಚೋದು ತೆಪ್ಪನಿಲ್ಲ. ಗಂಗವ್ವ ಸಿಡಾರ್ ಪಡಾರ್ ಅನ್ನಾದೂ ತೆಪ್ಪನಿಲ್ಲ.. ಮಳೆ ಕರೀದೆ ಮ್ವಾಡಕ್ಕೆ ಮ್ವಾಡ ಡಿಕ್ಕಿ ಮೋಡದಂಗಿತ್ತು ಅವರ ಕದ್ನ! ಆದ್ರೆ ಒಂದು ಜಿನ ಅದು ಮುಗಲ್ನೆ ಮುಟ್ಟಿಬಿಡ್ತು. ಪರ್ತಿ ರೋಜಾನು ಯೋಳ್ತಿದಂಗೆ ಅವತ್ತೂವೆ ಗಂಗವ್ವ,

“ನಾ ಯೇಟು ಬಗೇಲಿ ನಿಂಗೆ ಯೋಳ್ತಾ ಇದ್ರೂವೆ, ನಿನ್ನಾಟ ಬುಡ್ನೇ ಇಲ್ಲ. ಈ ಪಟ್ಟು ನೀನು ನಂಟ, ನಂಗೆ ಇರಿಯೋನು ಅನ್ನಾದ್ನೆಲ್ಲ ಮರತು ನಾನೂವೆ ಕಿತ್ತು ನಿಂತುಕಾಬೇಕಾಯ್ತದೆ” ಅಂದ್ಲಂತೆ.

“ಅದೇನು ಕಿತ್ತುಗಂಡೀಣೆ?” ಅಂದೋನು. “ಸಕ್ತಿ ಇದ್ರೆ, ಕಿತ್ತುಗೋ ಬಾಣೆ” ಅಂತ ಅಡವಿ ಮಾತ ಚುಕಾಯ್ಸಿಬುಟ್ಟನಂತೆ.