ವಿಷಯಕ್ಕೆ ಹೋಗು

ಪುಟ:Vyshakha.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೨

ವೈಶಾಖ

“ಏನು ಮಾಡಾದು, ನಂಜಣ್ಣ. ಮೊದ್ಲೆ ಯೋಳಿದ್ನಲ್ಲ- ಸಮ್ಮಂದ. ನಮ್ಮಟ್ಟಿ ಮಜ್ಜಿಗೆಯ ಈಚಲು ಮರದ ಕೆಳಗ್ಯಾಕೆ ಕುಡುಯೋದು ಅಂತ ಸುಮ್ಮಕಿವ್ನಿ.”

“ಅದ್ಯಾನೊ ಸರಿ... ನೀನು ಮಾನಿಸ್ಟ. ನಾನ ವಪ್ಪುಕತ್ತೀನಿ. ಆದ್ರೆ ನಿಮ್ಮ ಸುತ್ತಮುತ್ತನೋರು ಏನೇಳ್ತಾರೆ ಗ್ವತ್ತಾ? - ನಾವೂ ಇನ್ನು ನಾಕುಜಿನ ನ್ವಾಡ್ತೀವಿ. ಅಡವಿಯಷ್ನೆ ಇದ್ನ ಪಂಚಾತಿಗೆ ವಪ್ಪುಸಿದ್ರೆ ಸಮ. ಇಲ್ಲದೆ ವೋದ್ರೆ, ನಾವು ಆಜೂಬಾಬೂನೋರೆ ಪಂಚಾತಿಗೆ ಕ್ವಟ್ಟುಬುಡ್ತೀವಿ, ಅಂದ್ರು.”

ಆ ಮಾತ ಕೇಳಿ ನಂಗೆ ಜಂಗಾಬಲವೇ ಬುಟ್ಟೋಯ್ತು ಕನ್ಲ. ‘ಹಯ್ಯಯ್ಯೊ, ಅವರು ಕ್ವಡಾದು ಬ್ಯಾಡ’ ಅಂದ್ರೆ... ಅಂದ್ರೆ ನಂಜೇಗೌಡ ವೋಟಕೆ ಬುಟ್ನಾ?...

“ಸರೋಯ್ತು ಕನೊ, ಅಡವಿ. ನೀ ಬ್ಯಾಡ ಅಂದರೆ, ಅವರು ಬುಟ್ಟು ಬುಟ್ಟಾರೆ?”

“ಮಂತೆ, ಈಗ ನಾ ಯೇನ ಮಾಡಬೇಕು ಅಂತೀಯಣ್ಣ?”

“ನನ್ನ ಕ್ಯಾಳಿದ್ರೆ? - ನೀನೇ ತಕ್ಕಾಬೇಕು ತೀರುಮಾನ್ವ- ಈ ಇಚಾರ್ವ ಅವರೇ ಪಂಚಾತಿಗೆ ತಿಳಿಸಬೇಕೊ ಇಲ್ಲ, ಇದ್ನ ನೀನೇ ಪಂಚಾತಿಗೆ ವಪ್ಪುಸಬೇಕೊ ಅಂತಾವ.”

ಅಡವಿ ವಸಿ ಹ್ವತ್ತು ಬೆಪ್ಪು ಇಡುದೊನಂಗೆ ಕುಂತಿದ್ನಂತೆ. ನಂಜೇಗೌಡ ಕ್ವಾಪ ಮಾಡಿಕಂಡೇ ಅಂದನಂತೆ-

“ಇದ್ಯಾಕೊ ಸುಮ್ಮಕಾದೆ?- ಪಂಚಾತೀಲಿ ನಾನಿರಕ್ಕಿಲ್ವ... ಆ ಬಜಾರಿಗೆ ವಸಿ ಬುದ್ದಿ ಕಲಿಸಿ, ನಿನ್ನ ತಂಟೆಗೆ ಬರದಂತೆ ಮಾಡ್ತೀವಪ್ಪ... ಅದು ಚೆಂದವೊ, ಇಲ್ಲ ನೀ ಇಂಗೆ ಬೋಗಳ ತಿಂತಿರಾದು ಚೆಂದವೊ, ನೀನೇ ಯೋಳಿಬುಡು.”

ಅಡವಿ ತಬ್ಬಿಬ್ಬಾದ್ನಂತೆ.

“ನಂಗೊಂದೂ ವೋಳೀತಾನೆ ಇಲ್ಲ. ಎಂಗೆ ಮಾಡಾದೊ ಗ್ವತ್ತಾಯ್ತಾ ಇಲ್ಲ.”

“ಇದೇ ನಿನ್ನ ಕೊನೆ ಮಾತ?... ಅಂಗಾರೆ ಬುಡು. ನಾನೂವೆ ನಿನ್ನ ಹಿತಕ್ಕೇಳ್ದೆ. ಅವರಿವರು ಪಂಚಾತಿಗೆ ಕ್ವಡಕ್ಕೂವೆ ನೀನೇ ಕ್ವಡಕ್ಕೂವೆ ಯತ್ವಾಸ ಆಯ್ತದೆ. ಅವರು ಕ್ವಟ್ಟರೆ, ಕದ್ನ ಮಾಡಿ ಹೇಸಿಗೆ ಕೆಟ್ಟಿರೋ ನಿಮ್ಮಿಬ್ಬರ ಮ್ಯಾಲೂ ಕ್ವಡಬೇಕಾಯ್ತದೆ. ಆಗ ನೀನೂವೆ ಅವಳ ಜ್ವತ್ಗೆ ಅಪರಾದಿ ತಾನದಲ್ಲಿ ನಿಲ್ಲಬೇಕಾಯ್ತದೆ... ಅದ ಬುಟ್ಟು ನೀನೆ ಆ ಗಂಗಿ ಮ್ಯಾಲೆ ಕಂಪ್ಲಿಂಟು ಕ್ವಟ್ಟರೆ, ಅಪರಾದಿ ತಾನದಲ್ಲಿ ಅವಳಾಯ್ತಳೆ; ನೀನು ಫಿರ್ಯಾದಿ ಆಯ್ತೀಯೆ. ಆಗ ನ್ಯಾಯ ನಿನ್ನ ಕಡೀಕೆ ಹ್ವಳ್ಳಕ್ಕೆ ಅನುಕೂಲ ಆಯ್ತದೆ... ಯೋಚ್ಣೆ ಮಾಡು.”