ವಿಷಯಕ್ಕೆ ಹೋಗು

ಪುಟ:Vyshakha.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೪

ವೈಶಾಖ

ಗಂಗವ್ವ ಅಟ್ಟೀಲಿ ಇರನೇ ಇಲ್ಲ. ಯಾರದೊ ಅಟ್ಟೀಗೋಗಿದ್ಲು. ಆಚಿಂದ ಅವಳು ಅಟ್ಟಿ ವಳೀಕೆ ಕಾಲಿಡ್ತ ಇದ್ದಂಗೇಯ ಪಡಸಾಲೆ ಅಂಚಿನಲ್ಲಿ ಲಕ್ಕ ನಿಂತಿದ್ದ ಕಂಡು,

“ಲೋ ಲಕ್ಕ, ಯೇನ್ಲ ಇದು ನಿನ್ನ ದಾಸ್ಟೀಕ?... ನಮ್ಮ ಪಡಸಾಲೆ ವಳೀಕೆ ಕಾಲಡೊವಂಗೆ ಅದೆಯೆನ್ಲ? - ನಿನ್ನ ಜಾತಿಯೇನು? ನನ್ನ ಜಾತಿಯೇನು?...” ಉಚ್ಚುಚಾಗಿ ಅರಚಕ್ಕೆ ಸುರು ಮಾಡಿದ್ಲು.

“ಪಂಚಾತಿಯೋರು ನಿಮ್ಮ ಕರಿ ಅಂದ್ರ, ಅದ್ಕೆ ಬಂದೆ...”

“ಯಾರಾರ ಕರೀಲಿ. ಮೊದ್ಲು ಪಡಸಾಲೆ ಕಡದು ಹ್ವರೀಕೆ ಬಾ. ಅಮ್ಯಾಕೆ ಮುಂದಿನ ಮಾತು.”

ಬಾರುಕೋಲ್ನಿಂದ ಹ್ವಡಸಿಕೊಂಡೋನ ತರ ಜರ್ರನೆ ಇಳುದೋಗಿ, ಪಡಸ್ಯಾಲಿಂದ ತಟಕ್ಕನೆ ವೊರೀಕೆ ಬಂದು ಕ್ವಟ್ಟಿಗೇಲಿ ನಿಂತಿದ್ದ. ಅದೇ ವ್ಯಾಳ್ಯಕೆ ಸರ್ಯಾಗಿ ಗಂಗವ್ವನ ಸಿನೇಯಿತಗಾತಿ ನಿಂಗವ್ವ ಬಂದ್ಲು.

ಅವಳು ಬತ್ತಿದ್ದಂಗೇಯ, ಗಂಗವ್ವ ನಿಂಗವ್ವನ ಕುಟ್ಟೆ,

“ನ್ವಾಡೆ ನಿಂಗಿ. ಹೊಲೇರು ಏಟುತೋರ ಎಚ್ಚೋಗವ್ರೆ?... ಈ ಬಡ್ಡಿ ಹೈದ, ಪಂಚಾತಿಯೋರು ಕರದ್ರು ಅಂತೇಳಿ ನನ್ನ ಪಡಸಾಲೆ ವಳೀಕೆ ಬಂದಿದ್ನಲ್ಲ!...”- ಈ ತರ ವಪ್ಪಿಸಿದ್ಲು.

“ಅಂಗ?...” ಅಂತ ಕಣ್ಣ ಅಸ್ಟು ಅಗಲಕೂ ಕಿಸದು, “ಕಾಲಕೆಟ್ಟೋಯ್ತು” –ಅಂತ ತಳ ಆಕಿದ್ಲು ನಿಂಗವ್ವ.

“ಊ, ಕೀಳುಜಾತಿ ಹೊಲೇರಿಗೂವೆ ಈ ದಿಮಾಕು ಬಂದಮ್ಯಾಗೆ ಇನ್ನೇನವ್ವ ಉಳೀತು?- ಇವತ್ತು ಪಡಸಾಲೆ ವಳೀಕೆ ಬತ್ತಾನೆ. ನಾಳೀಕೆ ನಮ್ಮ ಮೊಗ್ಗಲಿಗೇ ಮನಗತೀನಿ ಅಂತಾನು ಬತ್ತಾನೆ. ನೇರ್ಪಾಯ್ತು ಬುಡು!...”

ಗಂಗವ್ವ ಇಂಗಂದಾಗ ಲಕ್ಕಂಗೆ ನೆತ್ತಿಂದ ಉರಿ ಕಿತ್ತುಗತ್ತು. ಮನಸ್ನಲ್ಲೆ ಇಂದೆ ನಡುದ್ನ ಅದೆಂಗಾರು ಮರತ್ಲು ಅಂತ ಚೋಜಿಗಪಟ್ಟ... ಆವತ್ತು ತಾನೂ ಅವಳೂವೆ ಚಿಕ್ಕೋರಾಗಿದ್ದಾಗ, ಕಾಡ್ನಲ್ಲಿ ದನ ಕಾಯ್ತಿದ್ದಂಗೆ ಮಳೆ ಬಂದು, ನೆಂದು, ಪಜ್ಜಿಯಾಗಿ ತಾವಿಬ್ರೂವೆ ಹುಲಿಮೆಳೆ ವಳುಗೆ ವೊಕ್ಕಂಡು ನಡುಗ್ತ ಕುಂತಿದ್ದಾಗ, ಇದೇ ಗಂಗಿ... ಊ. ತೀಟೆ ಮುಗದಮ್ಯಾಲೆ ನಾ ಹೊಲೆಯ!... ಥೂ ಕ್ಯಾಕರ್ಸಿ ಮೊಕ್ಕೆ ಉಗೀಬೇಕು ಅನ್ನುಸ್ತು...

ಲಕ್ಕ ಇಂಗೆ ಚಿಂತೆ ಮಾಡ್ತ ಇರೋನೂವೆ-

“ಹೂ, ಈಗೇಳು-ಅದೇನ ನಿನ್ನ ಕೊಳೆ ಪಂಚಾತಿ ಮಾತು?”