ವಿಷಯಕ್ಕೆ ಹೋಗು

ಪುಟ:Vyshakha.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

೨೯೭

ಎಣ್ಣೆಂಗಸು. ಅವ್ನ ಮ್ಯಾಲೆ ಕಯ್ಯಿ ಮಾಡೋವೋಟು ತಾಕತ್ತ ಕ್ವಡ್ನಿಲ್ಲ ದ್ವಾವರು...” ಸ್ಯಾಲೆ ಸೆರುಗ್ನಲ್ಲಿ ಕಣ್ಣೀರ ವತ್ತಿಕತ್ತಿದ್ಲು.

ಯಜಮಾನ್ರೆಲ್ಲ ತಲೆ ಎಟ್ಟಿಗಂಡು ಕುಂತಿದ್ರು. ಅಲ್ಲಿ ಕುಂತಿದ್ದ ಎಲ್ಲಾ ಜಯಮಾನ್ರೂವೆ ಕೆಟ್ಟೋರೆಲ್ಲ. ದರಮಕರುಮ ತಿಳಿದಿರೊ ಮನತಾನಸ್ತರೂ ವಸಿ ಜನ ಆದ್ರೂ ಅಲ್ಲಿದ್ರು...ಆದ್ರೆ ಅವರಲ್ಲಿ ಒಬ್ಬರಾರೂವೆ ಬಾಯ ತಗೀನಿಲ್ಲ. ಕೆಲವ್ರು ನಂಜೇಗೌಡನಂತೋರ್ಗೆ ಎದುರಿ ಸುಮ್ಮಕಿದ್ರೆ, ಇನ್ನು ಕೆಲವ್ರು ದಾರೀಲೋಗೋ ಮಾರಿ- ಅದನ್ಯಾಕೆ ನಮ್ಮಟ್ಟಿಗೆ ವೊಕ್ಕಿಸಿಕಾಬೇಕು? ಅಂತ ಸುಮ್ಮಕಾಗಿದ್ರು. ಇನ್ನು ವಸಿ ಜನ ಮಟದ ರುಣದಲ್ಲಿದ್ದೊರು. ಅವರಂತೂ ನಂಜೇಗೌಡಂಗೆ ಇರೋದ್ವಾಗಿ ವೋಗೋವಂಗೇ ಇರ್ನಿಲ್ಲ!...

ಈಗ ಅಡವಿ ಮ್ಯಾಕ್ಕೆದ್ದ.

“ಅವಳು ಯೋಳ್ತಿರಾದೆಲ್ಲ ಸುತರಾಂ ಸುಳ್ಳು. ನನ್ನಸ, ಎಮ್ಮೆ ಅವಳ ಪಾಲಿನ ಕ್ವಟ್ಟಿಗ್ಗೆ ಚಿಗದು, ಅಲ್ಲಾಕಿದ್ದ ತೊಪ್ಯ ಎತ್ತಿಗಂಡಿದ್ದೆ ಇನಾಯ್ಸಿ, ಅವಳ ದನಕರೀನ ತೊಪ್ಯ ನಾ ಮುಟ್ಟೇ ಇಲ್ಲ” ಅಂದ.

ಅಡವಿ ಸತ್ಯದ ತಲೆ ಮೆಟ್ಡಂತೆ ಸಟೆಯಾಡಿದ್ದು ಕೇಳಿ,

“ಎಂತಾ ಹಾದರಕೆ ಉಟ್ದ ಮಾತಾಡಿಯೊ?... ನಿಮ್ಮಪ್ನ ಬೀಜಕೆ ನೀ ಉಟ್ಟರಾದು ಸಾಜವಾದ್ರೆ ಇದ್ದದ್ದು ಇದ್ದಂಗೆ ಬೋಗಳೊ ಬಾಡಕಾವು” ಅಂದುಬುಟ್ಲು.

ಕೆಲವು ಯಜಮಾನ್ರು ಇಂತದೇ ಸನಗು ಸಿಕ್ಕಲೀಂತ ಕಾಯ್ತಿದ್ರು. ತನ್ನ ಬಾಯ್ನಿಂದ ತಾನೇ ಗಂಗಿ ಕೆಟ್ಟ ವಾಕ್ಸ ಕಡಸಿ ಸಿಕ್ಕಾಕಂಡಿದ್ಲು. ಮೆತ್ತಗೆ ನಂಜೇಗೌಡ ಗಂಗಪ್ನ ಚುಚ್ಚಿದ. ತಟಕ್ನೆ ಗಂಗಪ್ಪ ಎದ್ದು.

“ಎಂತಾ ಬಾಯಪ್ಪ ಇವಳ್ದು?- ಲೇ ಗಂಗೆ, ಗ್ಯಾನ ಇಟ್ಕಂಡು ಮಾತಾಡು. ಅಡವಿಯಪ್ಪ ನಿನಗಿಂತ ಇರಿಯೋನು. ಅವನ್ನ ನಮ್ಮುಂದ್ಯೆ ಇಂಗೆ ಬಯ್ಯೋಳು, ಇನ್ನು ನಿಮ್ಮಟ್ಟೀಲಿ ಇನ್ಯಾಪಾಟಿ ಅಡಿರಬೇಕು?” – ಎಂದು ಬೆದರುಸ್ದ.

“ಏ, ಗಂಗಪ್ಪ-ನನ್ನ, ಲೇ ಗೀ ಅಂತ ಕರೀಬ್ಯಾಡ. ನಾ ಯೇನು ನಿನ್ನಡತಿ ಕೆಟ್ಟೋಗ್ನಿಲ್ಲ, ನಿನ್ನ ಕೈಲಿ ಇಂಗೆಲ್ಲ ಕರಸಿಕಳ್ಳಕ್ಕೆ?... “ಗಂಗಿ ಕಪಾಲ್ಕೆ ತಟ್ಟಿದ ತರ ಜಾಡಿಸಿದ್ಲು.

“ಇನ್ನೇನ ಮಾರಾಣಿ ಮೊಮ್ಮಗಳೂಂತ ಕರೀಬೇಕೇನೊ?... ಅಬ್ಬಬ್ಬ... ಎಂತಾ ಬಜಾರಿ ಎಂಗಸಪ್ಪ!- ನೀ ಯೇನಾರ ನನ್ನೆಡತಿ ಆಗಿ ಈ ಮಾತಾಡಿದ್ರೆ, ನಿನ್ನ ಸಿಗದು ಊರ ಮುಂದ್ನ ದಿಡ್ಡಿ ಬಾಗಿಲ್ಗೆ ತ್ವಾರಣ ಕಟ್ತಿದ್ದೆ!”