೩೦೨
ವೈಶಾಖ
ಈ ತೀರುಮಾನಕೆ ಬಂದಿವಿ, ಬುದ್ದಿ. ತಾವು ಇದ್ಕೆ ವಪ್ಪುದ್ರೆ, ನಾಳೀಕೊ ನಾಡಿದ್ದೊ ನ್ಯಾಯಕ್ಕೆ ಸೇರಿಕತ್ತೀವಿ ಅಂದ್ರ. ಅದ್ಕೆ ಸ್ವಾಮಿಗಳು-ಎಲ್ಲ ಸಿವನ ಇಚ್ಚೆ. ನಿಮ್ಗೆ ಅವನ ಪ್ರೇವಣೆ ಆಗಿರೊ ಅಂಗದೆ. ಅಂಗೇ ಮಾಡಿ, ಅಂತ ಅಪ್ಪಣೆ ಕ್ವಟ್ಟರು...”
ಈಗಲೀಗ ಗಂಗಿ ಚೆಂದಾಗಿ ಬೆಚ್ಚೋಗಿದ್ಲು.
“ಯೇನಂದೆ ಮಾದಮ್ಮ?- ನನ್ನ ಬೆತ್ತಲೆ ಮಾಡಿ, ವೋಡೀತಾರಂತ?... ಅವತ್ನ ನ್ಯಾಯದಲ್ಲಿ ಅಂಗೇ ಕಂಬಕ್ಕೆ ಕಟ್ಟ ವೋಡಿಯೋದ ಅಂತ ಅಂತಿದ್ರಲ್ಲ?- ನಾನೂವೆ ಇನ್ನೇನ ಮಾಡಾದು ವೋಡದ್ರೆ ವೊಡಕಳ್ಲಿ ಅಂತ ಗಟ್ಟಿ ಮಾನಸ ಮಾಡಿದ್ದೆ... ಆದ್ರೆ-ಎಲ್ಲಾರ ಮುಂದೇನೂವೆ ಸ್ಯಲೆ ಊರಾಕೋದು ಅಂದ್ರೆ... ಇದೇನವ್ವ ವೊಸ ಮಾತು? ಈ ಊರಿನೋರ್ಗೆ ಯೇನವ್ವ ಬಂತು ಕೇಡುಗಾಲ?...” ಅಂತ ಬೇತುಗತ್ತಿದ್ಲು. ಆಗ ಮಾದಮ್ಮ
“ಈಗ ಯಾರ ದೂಸಣೆ ಮಾಡಿ ಯಾವ ಫಲ?... ನಿಂಗೆ ಬಂದಿರೊ ಗಂಡಾಂತ್ರದಿಂದ ಪಾರಾಗೊ ಉಪಾಯ ಉಡುಕು” ಅಂದ್ಲು. ವಸಿ ವೊತ್ತು ಗಂಗಿ ಕವ್ ಕಿವ್ ಅನ್ನುದೆ ಕುಂತಂಗಿತ್ತು. ಆಮ್ಯಾಕೆ ಮೆತ್ತಗೆ,
“ಉಹ್ಹು-ಯೇಟು ಬಗೇಲಿ ಯೋಚ್ಣೆ ಮಾಡಿದ್ರೂವೆ ನಂಗೆ ಯಾವ ಉಪಾಯವೂ ತೋಚಕ್ಕಿಲ್ಲ. ನಿಂಗೇನಾರ ವೊಳುದ್ರೆ, ಯೋಳು ಮಾದಮ್ಮ” ಅಂದ್ಲು. ಮಾದಮ್ಮ
“ನಂಗೂ ವೋಳೀತಾನೆ ಇಲ್ಲ...” ಅಂದೋಲು, ವಸಿ ವೊತ್ತು ಸುಮ್ಮಕಿದ್ದು, “ಊ- ಇರಾದು ಒಂದೇ ದಾರಿ... ನ್ವಾಡು ಗಂಗವ್ವ-ನಮ್ಮ ಮಟದ ಸ್ವಾಮಿಗೋಳು ದ್ಯಾವರಂತ ಮನಸ್ರು. ಅವರ್ಗೆ ಪಕ್ಸ ಪರಪಕ್ಸ ಅಂತ ಇಲ್ಲ. ಈಗ ನೀ ಬಂದು ಅವರ ಕಾಲ ಕಟ್ಟಿಕಂಡ್ರೆ, ನ್ವಾಡವ್ವ ಅವರೊಬ್ರೆ ಯೇನಾರ ಬಚಾವು ಮಾಡಬೌದು...” ಅಂದ್ಲು.
ಗಂಗಿಗೆ ಈ ಮಾತು ಇಡುಸ್ದಂಗೆ ಕಂಡ್ತು.
“ಯಾವಾಗ ವೋಗಾನ ಅಂತೀ?” ಅಂತ ಕ್ಯಾಳೇಬುಟ್ಲು.
“ಅಯ್ಯೊ, ಒಳ್ಳಿ ಕೆಲ್ಸ ಮಾಡಾಕೆ ಕಣೀನು ಕ್ಯಾಳಬೇಕ?... ನೀನು ಊ ಅಂದ್ರೆ, ಈಗಾಂದ್ರೆ ಈಗ...” –ಮಾದಮ್ಮ ಇಂಗೆ ಅಂತಿದ್ದಮಗೇಯ, ನಾನು ಜಾಗದಿಂದ ಜಾರಿ, ತಡದಿದ್ದ ಉಚ್ಚೆ ಪುಟ್ಟಣವ ಖಾಲಿ ಮಾಡಕ್ಕೆ ವೋರೀಕೋದೆ... ನಾನು ಬೇಲಿ ಮರೆಗೆ ಉಚ್ಚೆ ಉಯ್ಯಿತಿರೋನೂವೆ, ಮಾದಮ್ಮನೂ ಗಂಗಿಯೂವೆ ನಮ್ಮಿಬ್ರಟ್ಟಿ ಮುಂಚೋರಿ ಬಾಗಿಲ್ನಿಂದ ಮಟದ ದಿಕ್ಕೆ ಮೊಕವಾಗಿದ್ರ... ಮುಂದಕೇನಾಯ್ತೊ ನಂಗೆ ತಿಳೀದು. ಮಟದೊಳ್ಗೆ ಯೇನು ನಡೀತೊ ಆ