374
ಮುಕ್ಯ. ಅದ ಅಸಿಯಕ್ಕೆ ಅವುಳು ಬುಡ್ತಾಯಿಲ್ಲ. ಚಿನ್ನದ ಕರಡಿಗೇಲಿ ಲಿಂಗು ಇದೆ. ಸ್ವಾಮಿನ ಎದೆಮ್ಯಾಲೆ ಮಡಿಕ್ಕಂಡೆ ಕೈಲಾಸ ಸೇರಬೇಕೂಂತ ಆಸೆ ಅವಳ್ಗೆ, ಇನ್ನು ಉಳಿಕಂಡದ್ದು ಚಿನ್ನದ ಅಡ್ಡಿಕೆ. ಆ ಅಡ್ಡಿಕೆ ನೀನು ಮಾಡಿಸಿಕ್ವಟ್ಟ ಜಿನದಿಂದ್ಲೂವೆ, ಅವಳು ನಮ್ಮ ಮಟಕ್ಕೆ ಬರೋವಾಗ್ನೆಲ್ಲ ಅಕ್ಕಂಡೆ ಬತ್ತಿದ್ಲು. ಆ ವಡವೆ ಕಂಡರೆ ಅವಳ್ಗೆ ತನ್ನ ಪಿರಾಣಕ್ಕಿಂತಲೂ ಎಚ್ಚ ಪಿರೀತಿ... ಇವಿಸ್ಟೂವೆ ಅವುಳ ಜ್ವೇಲೆ ಗುದ್ದಕೋಗ್ಲಿ ಬುಡು. ಸಾಯೋ ವೊತ್ನಲ್ಲಿ, ಆ ಜೀವಾವ ನೋಯಸಬ್ಯಾಡ” ಅಂದರು... ಸ್ವಾಮಿಗಳೇ, ಇರಲಿ ಅಂದಮ್ಯಾಲೆ ನಂಜೇಗೌಡ ಯೇನ ಮಾಡಾನು?- ಗಮ್ಮನೆ ವಪ್ಲಿ, ಆ ಉಳಿಕೆ ವಡವೆಗಳ ಅಂಗೆ ಅವುಗಳ ಮೈಮ್ಯಾಲೇ ಬುಟ್ಟ.... ಆಯಮ್ಮ ಸಾಯೋ ವತ್ನಲ್ಲಿ ನಡೆದ ಈ ಯಾವಾರಾನೆಲ್ಲ ನನ್ನಂಗೆ, ಆ ಮಾರಿಗುಡೀಗೆ ಸೇರ್ತಾ ಇರ್ತವಲ್ಲ, ಆ ಪೋಲಿಮುಂಡೆಯೊವೊವೆ, ಅಲ್ಲೆ ನಿಂತು ನ್ವಾಡ್ತ ಇದ್ದೊ- ಸರಿ. ಅವಕೆ ಆಸೆ ಆಯ್ತು. ನೀ ಯೋಳಿದಂಗೆ, ರಾತ್ರಿನಾಗ ಇಲ್ಲಿಗೆ ಬಂದ್ರು, ಗುದ್ದ ಆಗದ್ರು, ಎಣದ ಮ್ಯಾಲಿನ ವಡವೇನೆಲ್ಲ ಅಸಿಕಂಡರು, ಫೇರಿ ಕಿತ್ತರು....” ಎಂದು ಇವರಿಸಿ, “ಹೆತ್ತ ತಾಯ ಲಾಡಿ ಬಿಚ್ಚೋ ಲೌಡಿ ಮಕ್ಕಳು” ಅಂತ ಖಾರವಾಗಿ ಬೈದು, ಬಾಯ್ಗೆ ತುಂಬಿದ ಎಲಡಿಕೆ ರಸವ ಪಿಚ್ಚನೆ ಉಗಿದ್ಲು.
“ಇಂತಾ ಸೊಳೆಮಕ್ಕಳ ಸಾಕ್ಕಂಡು ಊರ್ನೆ ನಿಪಾತ ಮಾಡ್ತಾ ಅವ್ನಲ್ಲ, ಆ ಗೌಡ?- ಈಗ ಅವನಿಗೇಯ ಒಳುಗೆ ದಸಿ ಕ್ವಟ್ರಲ್ಲ!...” ಎಂದ ಲಕ್ಕ.
“ಉಲಿ ಸವಾರಿ ಮಾಡಕ್ಕೊಂಟರೆ, ಒಂದಲ್ಲ ಒಂದು ದಪ ಅದು ನಮ್ನೇ ತಿನ್ನುದೆ ಬುಟ್ಟಾದೇನೊ?”
ದ್ಯಾವಾಜಮ್ಮ ಇಷ್ಟು ಯೋಳಿ ವೊಂಡುತಾ ಇದ್ಲು. ಲಕ್ಕ-
“ಈ ಆಳುಗೇರಿಯೋರ ಸುದ್ದಿ ಆಳಾಗೋಗ್ಲಿ. ಅಯ್ಯ ಎಂಗವ್ನೆ-ವಸಿ ಯೋಳು, ದ್ಯಾವಾಜತ್ತೆ?” ಕಾತರದಿಂದ ಕೇಳ್ದ.
“ಅವನ್ಯಾರೊ ನೋಡಿದೋರು?- ಸದಾ ರಾಚನ ಈಚಲು ಪ್ಯಾಟೇಲೊ ಬ್ಯಾರೆ ಯಾವುದಾರ ಈಚಲುವನದಲ್ಲೊ ಕುಡುದು ಅದೆಲ್ಲಿ ಬಿದ್ದಿರ್ತಾನೊ ಯೇನು ಕತೆಯೊ!... ನಿಮ್ಮವ್ವ ತೀರಿಕಂಡ ಮ್ಯಾಲಂತೂ ನಿಮ್ಮ ಗುಡ್ಲಿಗೆ ಮೊಕ ತೋರುಸೋದೆ ಅಪುರ್ಪ. ಅವುನು ಗೇಯೋದೆಲ್ಲ ಅವನ ಸರಾಪಿಗೇ ಸಮ ಆಯ್ತಿರಬೇಕು- ಆಪಾಟಿ ಕುಡುದ್ರೆ; ಅವನೊಂದು ಸತ್ತ ಕೂಟವೆ ಕನ ಬುಡು. ಕುಡುದು, ಕುಡುದು ಸಾಯಕ್ಕೆ ಜರ್ರನೆ ಜರಿಕಂಡೋಯ್ತಾ ಅವ್ನೆ. ನಾವೇನೂ ಅವ್ನ ಅಸೆ ಇಟ್ಟುಕಳೊವಂಗಿಲ್ಲ ಇನ್ನು...”